ಪಾಲಕ್ಕಾಡ್: ಚೇರತ್‌ನ ಬಾಬು ಕೊರಕಲಿಂದ ಪಾರಾದ ಸುದ್ದಿ ದೇಶಾದ್ಯಂತ ನಿನ್ನೆ,ಮೊನ್ನೆ ಗಮನ ಸೆಳೆದಿತ್ತು. 45 ಗಂಟೆಗಳ ಕಾಲ ಕಠಿಣ ಪರಿಶ್ರಮ ಮತ್ತು ಕಾಯುವಿಕೆಯ ನಂತರ, 23 ವರ್ಷದ ಬಾಬು ಅವರು ಸೇನೆಯ ಸುರಕ್ಷಿತ ಹಸ್ತದಿಂದ ಪಾರಾದರು.ಜೊತೆಗೆ ಭಾರತೀಯ ಸೇನೆಯ ಸಾಧನಾ ಪಥ, ಅದರ ಕಾರ್ಯಚಟುವಟಿಕೆ, ಸಾಮರ್ಥ್ಯ ಸಾಬೀತಾಗಿ ಭಾರತ್ ಮಾತಾ ಕೀ ಜೈ ಮತ್ತು ಭಾರತೀಯ ಸೇನೆಗೆ ಜೈಕಾರ ಮುಗಿಲುಮುಟ್ಟಿತು.
ತನ್ನನ್ನು ಕಂದರದಿಂದ ರಕ್ಷಿಸಿದ ಸೇನೆಯೊಂದಿಗೆ ಬಾಬು ಕೇಳಿದ್ದು ಒಂದೇ ಆಶಯವನ್ನು..ತನ್ನನ್ನೂ ಸೇನೆಗೆ ಸೇರಿಸುವಿರಾ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಕರ್ನಲ್ ಹೇಮಂದ್ ರಾಜ್ ತಿಳಿಸಿದ್ದಾರೆ. ಆತಂಕದ ಗಂಟೆಯ ನಂತರ ತನ್ನನ್ನು ಮತ್ತೆ ಬದುಕಿಸಿದ ಸೈನ್ಯದ ಬಗ್ಗೆ ಬಾಬುಗೆ ತುಂಬಾ ಬಾಂಧವ್ಯ ಮತ್ತು ಗೌರವ ಅಚ್ಚೊತ್ತಿದೆ.
ರಕ್ಷಿಸಿದ ಯೋಧರಿಗೆ ಪ್ರೀತಿಯ ಮುತ್ತಿನ ಮಳೆಗೆರೆಯುವ ದೃಶ್ಯ ನಾವೆಲ್ಲ ನಿನ್ನೆ ಮಾಧ್ಯಮಗಳ ಮೂಲಕ ಗಮನಿಸಿದ್ದೇವೆ. ಪುಟ್ಟ ಮಗುವಿನಂತೆ ಸೈನಿಕರ ತೆಕ್ಕೆಯಲ್ಲಿ ಪ್ರೀತಿಯ ಮುತ್ತು ನೀಡಿದ ಬಾಬು ಮುಂದೊಂದು ದಿನ ದೇಶ ಕಾಯುವ ಸೈನಿಕನಾದರೆ ಖುಷಿಯಾಗುತ್ತದೆ ಎನ್ನುತ್ತಾರೆ ಸ್ಥಳೀಯರು, ಸಂಬಂಧಿಕರು.
ಮಲಂಪುಳ ಮೂಲದ ಬಾಬು ಕಡಿದಾದ ಕುರ್ಂಪಚ್ಚಿ ಬೆಟ್ಟದಲ್ಲಿ ಸಿಕ್ಕಿಬಿದ್ದಿದ್ದರು. 45 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಬಾಬು ಅವರನ್ನು ರಕ್ಷಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುವ ಪ್ರಯತ್ನ ವಿಫಲವಾಗಿತ್ತು. ನಂತರ ರಾಜ್ಯ ಸರ್ಕಾರದ ವಿಶೇಷ ಬೇಡಿಕೆಯಂತೆ ಭಾರತೀಯ ಸೇನೆಯ ಸಹಾಯವನ್ನು ಕೋರಲಾಯಿತು. ಬಾಬು ಸದ್ಯ ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ವರದಿಯಾಗಿದೆ.