ನವದೆಹಲಿ: 'ಪಳೆಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳ ಕಡೆಗೆ ಜಗತ್ತು ಹೊರಳುವ ಮಹಾ ಪರಿವರ್ತನೆಯ ಹಾದಿಯನ್ನು ಭಾರತ ಮುನ್ನಡೆಸಲಿದೆ' ಎಂದು ಉದ್ಯಮಿ ಮುಕೇಶ್ ಅಂಬಾನಿ ಹೇಳಿದ್ದಾರೆ.
ಪುಣೆಯಲ್ಲಿ ನಡೆದ 'ಏಷಿಯಾ ಎಕನಾಮಿಕ್ ಡೈಲಾಗ್ 2022' ಸಮಾವೇಶದಲ್ಲಿ ಮಾತನಾಡಿದ ಅವರು, 'ಮುಂಬರುವ ದಿನಗಳಲ್ಲಿ ಸೌರ ಶಕ್ತಿ ಹಾಗೂ 'ಹೈಡ್ರೊಜನ್ ಪವರ್' ಶಕ್ತಿಯ ಪ್ರಮುಖ ಆಕರಗಳಾಗಿರಲಿವೆ' ಎಂದಿದ್ದಾರೆ.
'ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಸನಿಹದಲ್ಲಿರುವಾಗ ಪರ್ಯಾಯ ಇಂಧನಗಳ ಬಳಕೆಯ ನಾಯಕತ್ವವನ್ನು ವಹಿಸುತ್ತಿದೆ. ಅಂದು ಕೈಗಾರಿಕಾ ಕ್ರಾಂತಿ ಸಂಭವಿಸಿ ಜಗತ್ತು ಬದಲಾಗಲು ಹೇಗೆ ಕಾರಣವಾಯಿತೋ, ಇಂದು ಶಕ್ತಿಯ ಸುಸ್ಥಿರ ಸಂಪನ್ಮೂಲಗಳನ್ನು ಬಳಸಿಕೊಂಡು ಜಗತ್ತಿಗೆ ಮತ್ತೊಂದು ವಿಕಾಸವನ್ನು ತೋರಿಸಲು ಇದು ಕಾರಣವಾಗುತ್ತದೆ' ಎಂದಿದ್ದಾರೆ.
'ಜಗತ್ತು ಇಂದು ಹವಾಮಾನ ವೈಪರೀತ್ಯದಿಂದ ತತ್ತರಿಸಿದೆ. ಇದು ನಮಗೆಲ್ಲ ಎದುರಾಗಿರುವ ಮಹಾ ಕಂಟಕ. ಜಗತ್ತಿನ ಎಲ್ಲ ರಾಷ್ಟ್ರಗಳು ಪರಸ್ಪರ ಸಹಾಯ, ಸಹಕಾರಗಳೊಡನೆ ಈ ಕಂಟಕದಿಂದ ವಿಮುಕ್ತಿ ಹೊಂದಬೇಕಿದೆ. ಇದು ತ್ವರಿತವಾಗಿ ಆಗಬೇಕಿದೆ' ಎಂದು ಮುಕೇಶ್ ಅಂಬಾನಿ ಕಾಳಜಿ ವ್ಯಕ್ತಪಡಿಸಿದ್ದಾರೆ.
'ಕಳೆದ 20 ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಭಾರತವನ್ನು ನಂಬರ್ 1 ಮಾಡಿದಂತೆ ಮುಂದಿನ 20 ವರ್ಷಗಳಲ್ಲಿ ನಮ್ಮ ಯುವ ಸಮುದಾಯ ಪರ್ಯಾಯ ಇಂಧನ ಬಳಕೆಯಲ್ಲಿ ಭಾರತವನ್ನು ಮುಂಚೂಣಿಗೆ ತರಲಿದೆ' ಎಂದಿದ್ದಾರೆ.
'ನಮ್ಮ ರಿಲಯನ್ಸ್ ಇಂಡಸ್ಟ್ರೀಸ್ ಗ್ರೀನ್ ಎಕಾನಮಿಯನ್ನು ಕೇಂದ್ರಿಕರಿಸಿಕೊಂಡು ಕಾರ್ಯಾಚರಿಸುತ್ತಿದೆ. ಈ ವಲಯದಲ್ಲಿ ಬೃಹತ್ ಉದ್ಯೋಗವಕಾಶಗಳನ್ನು ಸೃಷ್ಟಿಸಲಾಗುತ್ತಿದೆ' ಎಂದು ಸ್ಪಷ್ಟಪಡಿಸಿದ್ದಾರೆ.
'ಇನ್ನೂ 20 ರಿಂದ 30 ವರ್ಷ ಭಾರತ ಕಲ್ಲಿದ್ದಲು ಶಕ್ತಿ ಹಾಗೂ ಆಮದು ತೈಲದ ಮೇಲೆ ಅವಲಂಬನೆಯನ್ನು ಮುಂದುವರಿಸುತ್ತದೆ' ಎಂದು ಅಂಬಾನಿ ತಿಳಿಸಿದ್ದಾರೆ.
'ಭಾರತದ ಆರ್ಥಿಕತೆ ಅತ್ಯಂತ ತ್ವರಿತವಾಗಿ ಬೆಳೆಯುತ್ತಿದೆ. 2030-32ರ ಹೊತ್ತಿಗೆ ಭಾರತದ ಆರ್ಥಿಕತೆ ಯುರೋಪಿಯನ್ ಯೂನಿಯನ್ ಅನ್ನೂ ಮೀರಿಸಲಿದೆ. ಕೆಲವೇ ದಶಕಗಳಲ್ಲಿ ಭಾರತದ ಶಕ್ತಿ ಸಂಪನ್ಮೂಲಗಳ ಬೇಡಿಕೆ ದ್ವಿಗುಣಗೊಳ್ಳಲಿದೆ' ಎಂದು ಅವರು ಗಮನಕ್ಕೆ ತಂದರು.
'ಇನ್ನೇನು ಕೆಲವೇ ವರ್ಷಗಳಲ್ಲಿ 20 ರಿಂದ 30 ಹೊಸ ಕಂಪನಿಗಳು ಎನರ್ಜಿ ಸೆಕ್ಟರ್ ಹಾಗೂ ಐಟಿ ಕ್ಷೇತ್ರದಲ್ಲಿ ರಿಲಾಯನ್ಸ್‌ಗಿಂತಲೂ ದೊಡ್ಡದಾಗಿ ಬೆಳೆಯುತ್ತವೆ' ಎಂದು ಸಮಾವೇಶದಲ್ಲಿ ಮುಕೇಶ್ ಅಂಬಾನಿ ಮುನ್ಸೂಚನೆ ನೀಡಿದ್ದಾರೆ.