ನವದೆಹಲಿ: ಯೂಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಯುದ್ಧದ ಬಿಸಿ ಭಾರತಕ್ಕೂ ತಟ್ಟಿದೆ. ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದು, ಬಹು ಸರಕು ವಿನಿಮಯ (ಎಂಸಿಎಕ್ಸ್) ಕೇಂದ್ರದಲ್ಲಿ ಚಿನ್ನದ ಬೆಲೆಯಲ್ಲಿ 1400 ರೂಪಾಯಿ ಏರಿಕೆಯಾಗಿದೆ.
10 ಗ್ರಾಂ ಚಿನ್ನದ ಬೆಲೆ 51,750 ರೂ.ಗೆ ತಲುಪಿದೆ. ಇದರೊಂದಿಗೆ ಇಂಧನ ದರದ ಮೇಲೂ ರಷ್ಯಾ ಯುದ್ಧ ಘೋಷಣೆ ಪರಿಣಾಮ ಬೀರಲಿದೆ.
ಪ್ರತಿ 10 ಗ್ರಾಂ ಚಿನ್ನಕ್ಕೆ 1400 ರೂ. ಬೆಲೆ ಏರಿಕೆಯಾಗಿದ್ದು, ಈ ವರ್ಷದಲ್ಲಿ ಅತ್ಯಧಿಕ ಬೆಲೆ ಹೆಚ್ಚಳ ಇದಾಗಿದೆ. ಸ್ಪಾಟ್ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ (1 ಔನ್ಸ್=28.3495 ಗ್ರಾಂ) ಚಿನ್ನದ ಬೆಲೆ 1925 ಡಾಲರ್ನಿಂದ 1950 ಡಾಲರ್ಗೆ ಏರಿಕೆಯಾಗಿದೆ. ಕಳೆದ 13 ತಿಂಗಳಲ್ಲೇ ಇದು ಅತ್ಯಧಿಕ ಏರಿಕೆಯಾಗಿದೆ.
ಚಿನ್ನದ ಬೆಲೆ ಏರಿಕೆಗೆ ರಷ್ಯಾ ಮತ್ತು ಯೂಕ್ರೇನ್ ನಡುವಿನ ಬಿಕ್ಕಟ್ಟೇ ಕಾರಣ ಎಂದು ಆರ್ಥಿಕ ಪರಿಣಿತರು ವಿಶ್ಲೇಷಿಸಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಚಿನ್ನದ ಬೆಲೆ ಪ್ರತಿ ಔನ್ಸ್ಗೆ 2000 ಡಾಲರ್ ತಲುಪಲಿದೆ ಎಂದು ಹೇಳಿದ್ದಾರೆ.
ಇಂಧನ ದರವೂ ಏರಿಕೆ
ಯುದ್ಧದ ಕಾರ್ಮೋಡದಿಂದಾಗಿ ಹಣದುಬ್ಬರವೂ ಏರಿಕೆಯಾಗಿದ್ದು, ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 100 ಡಾಲರ್ ಮುಟ್ಟಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಜಾಗತಿಕ ಮಾರುಕಟ್ಟೆಯಲ್ಲಿ ಶೇ. 10 ರಷ್ಟು ಏರಿಕೆಯೊಂದಿಗೆ ಪ್ರತಿ ಬ್ಯಾರೆಲ್ಗೆ 110 ಡಾಲರ್ ತಲುಪಲಿದೆ ಎಂದು ಐಐಎಫ್ಎಲ್ ಸೆಕ್ಯುರಿಟಿಯ ಉಪಾಧ್ಯಕ್ಷ ಅಜುಜ್ ಗುಪ್ತಾ ತಿಳಿಸಿದ್ದಾರೆ. ಈಗಾಗಲೇ ಎಚ್ಚರಿಕೆಯ ಮಟ್ಟ ತಲುಪಿದ್ದು, ಭಾರತದಲ್ಲಿ ಇಂಧರ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.