ನವದೆಹಲಿ: ಏರ್ ಇಂಡಿಯಾ ಮತ್ತೆ ಟಾಟಾ ತೆಕ್ಕೆಗೆ ಜಾರಿದ ನಂತರ ಹೊಸದಾಗಿ ನೇಮಕಗೊಂಡ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶ ಟರ್ಕಿಯ ಇಲ್ಕರ್ ಐಸಿ ಅವರ ಸಂಪೂರ್ಣ ಹಿನ್ನೆಲೆಯನ್ನು ಕೇಂದ್ರ ಗೃಹ ಸಚಿವಾಲಯ(ಎಂಎಚ್‌ಎ) "ಸೂಕ್ಷ್ಮವಾಗಿ" ಪರಿಶೀಲನೆ ನಡೆಸಲಿದೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.
ಸರ್ಕಾರದಿಂದ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡ ಟಾಟಾ ಗ್ರೂಪ್, ನಷ್ಟದಲ್ಲಿರುವ ವಿಮಾನಯಾನ ಸಂಸ್ಥೆಯ ನೂತನ ಸಿಇಒ ಮತ್ತು ಎಂಡಿ ಆಗಿ ಇಲ್ಕರ್ ಐಸಿ ಅವರನ್ನು ನೇಮಕ ಮಾಡಿರುವುದಾಗಿ ಇತ್ತೀಚೆಗೆ ಪ್ರಕಟಿಸಿತ್ತು.
ಕೇಂದ್ರ ಗೃಹ ಸಚಿವಾಲಯವು ಯಾವುದೇ ಭಾರತೀಯ ಕಂಪನಿಯ ಪ್ರಮುಖ ಹುದ್ದೆಗಳಲ್ಲಿ ವಿದೇಶಿ ಪ್ರಜೆಗಳನ್ನು ನೇಮಿಸಿದಾಗ ಅವರ ಸಂಪೂರ್ಣ ಹಿನ್ನೆಲೆ ಪರಿಶೀಲನೆಯನ್ನು "ಸೂಕ್ಷ್ಮವಾಗಿ" ನಡೆಸುತ್ತದೆ ಎಂದು ಮೂಲಗಳು ತಿಳಿಸಿವೆ.
ಏರ್ ಇಂಡಿಯಾಗೆ ಹೊಸದಾಗಿ ನೇಮಕಗೊಂಡ ಸಿಇಒ ಮತ್ತು ಎಂಡಿಗೂ ಇದು ಅನ್ವಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಕೇಂದ್ರ ಗೃಹ ಸಚಿವಾಲಯ ಇನ್ನೂ ಟಾಟಾ ಸಮೂಹದಿಂದ ಅಥವಾ ನಾಗರಿಕ ವಿಮಾನಯಾನ ಸಚಿವಾಲಯದಿಂದ ಐಸಿ ನೇಮಕದ ಕುರಿತು ಯಾವುದೇ ಅಧಿಕೃತ ಮಾಹಿತಿ ಸ್ವೀಕರಿಸಿಲ್ಲ.
ಐಸಿ ನೇಮಕದ ಬಗ್ಗೆ ಅಧಿಕೃತ ಮಾಹಿತಿ ಸ್ವೀಕರಿಸಿದ ನಂತರ, ಭದ್ರತಾ ಕ್ಲಿಯರೆನ್ಸ್‌ನ ಸಂಪೂರ್ಣ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಎಂದು ಮೂಲಗಳು ತಿಳಿಸಿವೆ.