ಕಾಸರಗೋಡು: ಆರೆಸ್ಸೆಸ್ ಕಾರ್ಯಕರ್ತ, ಜ್ಯೋತಿಷ್ ಸಾವಿನ ನಂತರ ಭುಗಿಲೆದ್ದಿದ್ದ ಬಿಜೆಪಿ ಆಂತರಿಕ ಭಿನ್ನಮತ, ಪ್ರಸಕ್ತ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಗೆ ಕಾರ್ಯಕರ್ತರ ಒಂದು ವಿಭಾಗ ಬೀಗ ಜಡಿಯುವ ಮೂಲಕ ಬೀದಿಗೆ ಬಂದು ನಿಂತಿದೆ.
ಕುಂಬಳೆ ಗ್ರಾಮ ಪಂಚಾಯಿತಿಯ ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನಗಿಟ್ಟಿಸಲು ಸಿಪಿಎಂ ಜತೆ ಕೈಜೋಡಿಸಿರುವ ಆರೋಪದಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ಪ್ರೇಮಲತ, ಪ್ರೇಮಾವತೀ ಅವರನ್ನು ಪದಚ್ಯುತಿಗೊಳಿಸುವುದರ ಜತೆಗೆ. ಇದಕ್ಕೆ ಯೋಜನೆ ರೂಪಿಸಿದ ಪಕ್ಷದ ಮುಖಂಡರಾದ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ ಪಿ.ಸುರೇಶ್ ಕುಮಾರ್ ಶೆಟ್ಟಿ ಹಾಗೂ ಮಣಿಕಂಠ ರೈ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಆಗ್ರಹಿಸಿ ಭಾನುವಾರ ಬಿಜೆಪಿ ಜಿಲ್ಲಾ ಕಚೇರಿಗೆ ಬೀಗಜಡಿದು ಪ್ರತಿಭಟನೆ ನಡೆಸಲಾಯಿತು. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಮಂಜೇಶ್ವರ, ಕುಂಬಳೆ, ಕಾಸರಗೋಡಿನಿಂದ ಆಗಮಿಸಿದ್ದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದರು. ಪಕ್ಷಕ್ಕಾಗಿ ಅಹೋರಾತ್ರಿ ದುಡಿಯುತ್ತಿದ್ದ ಜ್ಯೋತಿಷ್ ಅವರ ಸಂಬಂದಿ, ಕುಂಬಳೆ ಕೊಯಿಪ್ಪಾಡಿ ನಿವಾಸಿ ವಿನು ಬಿಜೆಪಿ ಎಂಬವರನ್ನು ಕುಂಬಳೆಯಲ್ಲಿ ಕೊಲೆಗೈದ ಪ್ರಕರಣದ ಆರೋಪಿಯೊಬ್ಬನಿಗೆ ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನ ಲಭಿಸಲು ಸಹಾಯ ಮಾಡಿ, ಇದಕ್ಕೆ ಪ್ರತಿಯಾಗಿ ಎರಡು ಸ್ಥಾನಗಳನ್ನು ಗಿಟ್ಟಿಸಿಕೊಂಡಿರುವ ಬಿಜೆಪಿ ಸದಸ್ಯರ ಕ್ರಮಕ್ಕೆ ಪಕ್ಷದ ಒಂದು ವಿಭಾಗದಿಂದ ವ್ಯಾಪಕ ಟೀಕೆ, ಪ್ರತಿಭಟನೆ ಎದುರಾಗಿತ್ತು. ಸಿಪಿಎಂಗೆ ಸಹಾಯ ಮಾಡಿರುವ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳದೆ, ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರ ವಿರುದ್ಧವೂ ಘೋಷಣೆ ಕೇಳಿಬಂತು. ಇದೇ ವಿಷಯಕ್ಕೆ ಸಂಬಂಧಿಸಿ ಕಳೆದ ಕೆಲವು ದಿವಸಗಳಿಂದ ಬಿಜೆಪಿಯಲ್ಲಿ ರಾಜೀನಾಮೆ ಪರ್ವವೂ ಮುಂದುವರಿದಿತ್ತು. ನಗರಸಭಾ ಪ್ರತಿಪಕ್ಷ ಮುಖಂಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ.ರಮೇಶ್ ಸೇರಿದಂತೆ ಹಲವರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು.
ಏನಂತಾರೆ: ಕಾರ್ಯಕರ್ತರು ತಮ್ಮ ಅಸಮಧಾನ ಈಗಾಗಲೇ ಹೊರಹಾಕಿದ್ದು, ಇದಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳಲು ಜಿಲ್ಲಾ ಕೋರ್ ಕಮಿಟಿ ಸಭೆ ನಡೆಸಲಿದೆ. ಪಕ್ಷದಲ್ಲಿನ ಬೆಳವಣಿಗೆ ಮುಜುಗರಕ್ಕೆ ಕಾರಣವಾಗಿದ್ದು, ರಾಜ್ಯ ಸಮಿತಿಗೂ ಈ ಬಗ್ಗೆ ಮನವರಿಕೆ ಮಾಡಲಾಗಿದೆ. ರಾಜ್ಯ ಸಮಿತಿ ಜತೆ ಸಮಾಲೋಚಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
ರವೀಶ ತಂತ್ರಿ ಕುಂಟಾರು, ಅಧ್ಯಕ್ಷ
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ