ಕೀವ್: ರಷ್ಯಾ ಆಕ್ರಮಣ ಮಾಡಿದಾಗಿನಿಂದಲೂ ಯೂಕ್ರೇನ್ ಎಂಬ ದೇಶವೊಂದಿದೆ ಎಂದು ಬಹುತೇಕ ಮಂದಿಗೆ ತಿಳಿದುಬಂದಿದೆ. ಅಲ್ಲಿಯವರೆಗೆ ಇದರ ಬಗ್ಗೆ ತಿಳಿದವರು ಬೆರಳೆಣಿಕೆಯಷ್ಟೇ ಮಂದಿ ಎನ್ನಬಹುದೇನೋ. ಎಂಬಿಬಿಎಸ್, ಇಂಜಿನಿಯರಿಂಗ್ ಸೇರಿದಂತೆ ಕೆಲವು ಉನ್ನತ ವ್ಯಾಸಂಗವನ್ನು ಅತಿ ಕಡಿಮೆ ಖರ್ಚಿನಲ್ಲಿ ನೀಡುತ್ತಿರುವ ಯೂಕ್ರೇನ್‌ಗೆ ಭಾರತದಿಂದ ಅಷ್ಟೇ ಏಕೆ ಕರ್ನಾಟಕದ ಮೂಲೆಮೂಲೆಗಳಿಂದಲೂ ಅದೆಷ್ಟೋ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ ಎಂದು ತಿಳಿದಾಗ ಅಚ್ಚರಿ ಪಟ್ಟವರು ಅಷ್ಟಿಷ್ಟಲ್ಲ.
ಇಂಥ ವ್ಯಾಸಂಗ ಮಾಡುತ್ತಿರುವವರು ಹಾಗೂ ಅವರ ಸಂಬಂಧಿಕರಿಗಷ್ಟೇ ತಿಳಿದಿದ್ದ ಯೂಕ್ರೇನ್ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಕೇಳಿದರೆ ನಿಮಗೂ ಅಚ್ಚರಿಯಾಗಬಹುದು. ಏಕೆಂದರೆ ತಂತ್ರಜ್ಞಾನದಲ್ಲಿಯೂ ಯೂಕ್ರೇನ್ ಬಹಳ ಮುಂದಿದೆ.
ರಷ್ಯಾ ಆಕ್ರಮಣದಿಂದ ಜರ್ಝರಿತವಾಗಿರುವ ಯೂಕ್ರೇನ್ ತನಗೆ ಸಹಾಯ ಮಾಡಿ ಎಂದು ವಿಶ್ವದ ಮುಂದೆ ಅಂಗಾಲಾಚಿ ಬೇಡಿಕೊಳ್ಳುತ್ತಿದೆ. ಭಾರತ ಮಧ್ಯೆ ಪ್ರವೇಶಿಸಿ ಯುದ್ಧ ನಿಲ್ಲಿಸಬೇಕು ಎಂದೂ ಇದಾಗಲೇ ಯೂಕ್ರೇನ್ ಕೇಳಿಕೊಂಡಿದೆ. ಈ ಹಿಂದೆ ಭಾರತದ ವಿರುದ್ಧವೇ ಕುತಂತ್ರ ಮಾಡಿದ್ದ ಯೂಕ್ರೇನ್, ಇದೀಗ ಭಾರತದ ಕಾಲು ಹಿಡಿದುಕೊಂಡಿದೆ. ಅದೇನೆ ಇದ್ದರೂ ಭಾರತೀಯರು ಸೇರಿದಂತೆ ವಿಶ್ವದ ಹಲವರು ಬಳಸುತ್ತಿರುವ ಫೋನ್‌ನಲ್ಲಿ ಇರುವ ಹಲವಾರು ಆಯಪ್‌ಗಳು ಯೂಕ್ರೇನ್ ಮೂಲದ್ದೇ ಎಂದರೆ ಅಚ್ಚರಿಯಾಗದೇ ಇರದು.
ಹಣಕಾಸಿನ ವಹಿವಾಟು ನಡೆಸುವ ಆಯಪ್‌ಗಳಷ್ಟೇ ಅಲ್ಲದೇ ಅಭ್ಯಾಸಕ್ಕಾಗಿ ಬೇಕಾಗಿರುವ ಮಾಹಿತಿ ನೀಡುವ ಆಯಪ್‌ಗಳ ತವರು ಯೂಕ್ರೇನ್. ಪೇಮೆಂಟ್ ಜಗತ್ತಿನ ದೈತ್ಯ ಪೇ ಪಾಲ್, ಸ್ನ್ಯಾಪ್ ಚಾಟ್, ಇಂಗ್ಲಿಷ್ ಕಲಿಸುವ ಗ್ರಾಮರ್ಲಿ ಎಲ್ಲವೂ ಯೂಕ್ರೇನ್ ಮೂಲದ್ದು. ಅಷ್ಟೇ ಏಕೆ, ದಿನನಿತ್ಯ ಅದೆಷ್ಟೋ ಮಂದಿ ಅರೆ ಕ್ಷಣವೂ ಬಿಟ್ಟರದ ವಾಟ್ಸ್‌ಆಯಪ್ ಕೂಡ ಯೂಕ್ರೇನ್‌ನ ಒಂದು ಭಾಗವೇ. ವಾಟ್ಸ್‌ಆಯಪ್ ನಿರ್ಮಾಣದ ಸೃಷ್ಟಿಕರ್ತ ಇದೇ ದೇಶದ ಫಾಸ್ಟೀವ್ ಪ್ರದೇಶದಲ್ಲಿ ಹುಟ್ಟಿದ ಜಾನ್ ಕೌಮ್. ಯೂಕ್ರೇನ್‌ಗೆ ವಲಸಿಗರಾಗಿ ಬಂದು ನೆಲೆಸಿದ್ದ ಜಾನ್ ಕೌಮ್ ಅಮೆರಿಕದಲ್ಲಿ ವಾಸವಿದ್ದಾರೆ ಅಷ್ಟೇ.
ಇನ್ನು ಸ್ನ್ಯಾಪ್ ಚಾಟ್ ಬಗ್ಗೆ ಹೇಳುವುದಾದರೆ, ಇದರ ಮೂಲ ಯೂಕ್ರೇನ್ ದೇಶದ ಲಕ್ಸುರಿ ಎಂಬ ಸಂಸ್ಥೆ. ಇದರ ಸ್ಥಾಪಕ ಯೂರಿ ಮೊನಾಸ್ಟಿರ್ಶಿನ್. ಸ್ನ್ಯಾಪ್ ಚಾಟ್ ಕೇಂದ್ರ ಕಚೇರಿ ಈಗಲೂ ಕೈವ್ ಮತ್ತು ಜಪೋರಿಜಾ ಪಟ್ಟಣದಲ್ಲಿದೆ. ಪೇಪಾಲ್ ಕಂಪನಿಯ ಸಂಸ್ಥಾಪಕ ಪ್ರಸ್ತುತ ಅಮೆರಿಕ ಪ್ರಜೆಯಾಗಿರುವ ಯೂಕ್ರೇನ್ ಮೂಲದ ಮ್ಯಾಕ್ಸ್ ಲೆವ್ಚಿನ್. ಮೂವರು ಯೂಕ್ರೇನಿಯನ್ ಪ್ರಜೆಗಳಿಂದ ರಚಿತವಾದ ಗ್ರಾಮರ್ಲಿ ಅಪ್ಲಿಕೇಶನ್, ಕೀವ್‌ನಲ್ಲಿ ಈಗಲೂ ತನ್ನ ಅತೀದೊಡ್ಡ ಕಚೇರಿಯನ್ನು ಹೊಂದಿದೆ. ಇವಿಷ್ಟೇ ಅಲ್ಲದೇ ಇನ್ನೂ ಅನೇಕ ಆಯಪ್‌ಗಳ ಜನಕರು ಹುಟ್ಟಿದ್ದು ಹಾಗೂ ಕಂಪೆನಿ ಇರುವುದು ಯೂಕ್ರೇನ್‌ನಲ್ಲಿಯೇ.