ಬದಿಯಡ್ಕ ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಾಲಯ ಆವರಣದ ಗದ್ದೆಯಲ್ಲಿ ಜೈವಿಕ ತರಕಾರಿ ಬೆಳೆಯ ಬಿತ್ತನೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ದೇವಾಲಯದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮೇ 6 ರಿಂದ 15 ವರೆಗೆ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಸಾವಯವ ತರಕಾರಗಳ ಬೆಳೆಯ ಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕುಟುಂಬಶ್ರೀ ಸ್ವ ಸಹಾಯ ಸಂಘ, ರಾಷ್ಟ್ರೀಯ ನೌಕರಿ ಖಾತರಿ ಯೋಜನೆ, ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ದೇವಾಲಯದ ವಿವಿಧ ಸಮಿತಿಗಳ ಕಾರ್ಯಕರ್ತರು ಇಬ್ಬರು ದಾನಿಗಳು ನೀಡಿರುವ ಒಂದು ಎಕ್ರೆ ಗದ್ದೆಯಲ್ಲಿ ಈ ಜೈವಿಕ ತರಕಾರಿ ಬೆಳೆ ನಡೆಸುವರು.
ಈ ಸಂಬಂಧ ಸೋಮವಾರ ನಡೆದ ಸಮಾರಂಭದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಬಿತ್ತನೆಗೆ ಚಾಲನೆ ನೀಡಿದರು. ದೇವಾಲಯದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಆಸ್ತಿಕರು ಜೊತೆಗಿದ್ದರು. ಪೂರ್ಣಕುಂಭಗಳೊಂದಿಗೆ ಶ್ರೀಗಳನ್ನು ಸ್ವಾಗತಿಸಲಾಯಿತು. ಹಿರಿಯ ಧಾರ್ಮಿಕ ಮುಂದಾಳು ಮನು ಪಣಿಕ್ಕರ್ ಅವರ ನೇತೃತ್ವದಲ್ಲಿ ಚೆಂಡೆ ಮೇಳ ಜರಗಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ದೇವಾಲಯಗಳ ಪುನರುದ್ಧಾರ ಪ್ರಕ್ರಿಯೆಗಳು ಸಮಾಜದ ಏಳಿಗೆಗೆ ಪೂರಕ. ಕೃಷಿ-ಋಷಿ ಸಂಸ್ಕøತಿಗೆ ನಮ್ಮ ದೇಶದಲ್ಲಿ ತನ್ನದೇ ಮಹತ್ವವಿದೆ. ಸಾವಯ ಕೃಷಿ ಶಾಶ್ವತವಾದ ವಿಧಾನ. ಪ್ರತಿರೋಧ ಶಕ್ತಿಯ ಹೆಚ್ಚಳಕ್ಕೆ ಜೈವಿಕ ಕೃಷಿ ಅಗತ್ಯ. ದೇವಾಲಯಗಳಲ್ಲಿ ಹೂವು, ತುಳಸಿ ಯಾವತ್ತೂ ಕಡಿಮೆಯಾಗದಂಥಾ ಕೃಷಿ ನಡೆಯಬೇಕು ಎಂದು ನುಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎನ್.ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಆಡಳಿತೆ ಸಮಿತಿ ಅಧ್ಯಕ್ಷ ವಿಶ್ವನಾಥ ಡಿ.ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬದಿಯಡ್ಕ ವಲಯ ಸಮಿತಿ ಅಧ್ಯಕ್ಷ ದಿನೇಶ್, ಗಣೇಶ ವತ್ಸ, ಬಾಲಕೃಷ್ಣ ನಾಯ್ಕ್ ಸಾಂತಡ್ಕ, ಗೋಪಾಲ ಭಟ್ ಚುಕ್ಕಿನಡ್ಕ ಮೊದಲಾದವರು ಉಪಸ್ಥಿತರಿದ್ದರು.
ಬಾಲಕೃಷ್ಣ ಸುವರ್ಣ ಸ್ವಾಗತಿಸಿ, ದಿವಾಕರ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ ಮಾವಿನಕಟ್ಟೆ ವಂದಿಸಿದರು.