ನವದೆಹಲಿ:ಪ್ರೆಸ್ ಇನ್ಫಾರ್ಮೇಶನ್ ಬ್ಯುರೋ (ಪಿಐಬಿ) ಹೊರಡಿಸಿದ ನೂತನ ಮಾನ್ಯತೆ ಮಾರ್ಗಸೂಚಿಗೆ ರವಿವಾರ ಆಕ್ಷೇಪ ವ್ಯಕ್ತಪಡಿಸಿರುವ 'ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ', ಸರಕಾರದ ವ್ಯವಹಾರಗಳ ಯಾವುದೇ ವಿಮರ್ಶಾತ್ಮಕ ಹಾಗೂ ತನಿಖಾ ವರದಿಯನ್ನು ನಿರ್ಬಂಧಿಸುವ ಉದ್ದೇಶದಿಂದ ಈ ಮಾರ್ಗಸೂಚಿಯಲ್ಲಿ ಅಸ್ಪಷ್ಟ, ಅನಿಯಂತ್ರಿತ, ಹಾಗೂ ಕಠಿಣ ಶರತ್ತುಗಳನ್ನು ಸೇರಿಸಲಾಗಿದೆ ಎಂದಿದೆ.
ಈ ನೂತನ ಮಾನ್ಯತೆ ಮಾರ್ಗಸೂಚಿಗಳನ್ನು ಹಿಂಪಡೆಯಬೇಕು ಎಂದು ಅದು ಆಗ್ರಹಿಸಿದೆ. ಅಲ್ಲದೆ ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿಗೆ ತರಲು ಪ್ರೆಸ್ ಇನ್ಫಾರ್ಮೇಶನ್ ಬ್ಯುರೋ ಸಂಬಂಧಿತ ಎಲ್ಲರೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸಬೇಕು ಎಂದು ಅದು ಆಗ್ರಹಿಸಿದೆ. ಪತ್ರಕರ್ತರಿಗೆ ಮಾನ್ಯತೆ ನೀಡಲು ನಿಯಮ ವಿಧಿಸುವ ಪ್ರೆಸ್ ಇನ್ಫಾರ್ಮೇಶನ್ ಬ್ಯುರೋ ಆಫ್ ಇಂಡಿಯಾ ಬಿಡುಗಡೆ ಮಾಡಿದ ನೂತನ ಕೇಂದ್ರೀಯ ಮಾಧ್ಯಮ ಮಾನ್ಯತೆ ಮರ್ಗಸೂಚಿ ಕುರಿತು ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕಳವಳ ವ್ಯಕ್ತಪಡಿಸುತ್ತಿದೆ ಎಂದು ಹೇಳಿಕೆ ತಿಳಿಸಿದೆ.
ಹೊಸ ಮಾರ್ಗಸೂಚಿಗಳು ಪತ್ರಕರ್ತರ ಮಾನ್ಯತೆಯನ್ನು ರದ್ದುಪಡಿಸುವ ವಿವಿಧ ಹೊಸ ನಿಬಂಧನೆಗಳನ್ನು ಒಳಗೊಂಡಿದೆ. ಇವುಗಳಲ್ಲಿ ಹಲವು ನಿರಂಕುಶ ಹಾಗೂ ಕಾನೂನು ಅನ್ವಯಿಸದ ಕ್ರಮ ಕೈಗೊಳ್ಳುವುದು ಕೂಡ ಸೇರಿದೆ ಎಂದು ಅದು ಗಮನ ಸೆಳೆದಿದೆ.
ಎಡಿಟರ್ಸ್ ಗಿಲ್ಡ್ ಈ ನೂತನ ಮಾನ್ಯತೆ ಮಾರ್ಗಸೂಚಿಯಲ್ಲಿನ ಹಲವು ವಿಷಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪ್ರೆಸ್ ಇನ್ಫಾರ್ಮೇಶನ್ ಬ್ಯುರೋಗೆ ಪತ್ರ ಬರೆದಿದೆ ಎಂದು ಹೇಳಿಕೆ ತಿಳಿಸಿದೆ.