ನವದೆಹಲಿ: ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಭಾರತದ ವಿರುದ್ಧ ಪ್ರಾರಂಭಿಸಿದ್ದ ಇಂಡಿಯಾ ಔಟ್ ಅಭಿಯಾನವನ್ನು ಅಪರಾಧಗೊಳಿಸುವ ಕಾನೂನು ಜಾರಿಗೊಳಿಸಲು ಮಾಲ್ಡೀವ್ಸ್ ಸರ್ಕಾರ ಮುಂದಾಗಿದೆ.
ಈ ದ್ವೇಷ ಅಭಿಯಾನದಿಂದ ರಾಷ್ಟ್ರೀಯ ಭದ್ರತೆಗೆ ಹಾಗೂ ಅಲ್ಲಿರುವ ಸುಮಾರು 29,000 ಮಂದಿ ಭಾರತೀಯರಿಗೆ, ಭಾರತದಲ್ಲಿರುವ 5,000 ಮಾಲ್ಡೀವ್ಸ್ ಪ್ರಜೆಗಳಿಗೆ ಅಪಾಯ ಉಂಟಾಗಬಹುದು ಎಂಬ ಭೀತಿ ಮಾಲ್ಡೀವ್ಸ್ ಸರ್ಕಾರಕ್ಕೆ ಮೂಡಿದ್ದು ಕಾನೂನು ಜಾರಿಗೊಳಿಸಲು ಚಿಂತನೆ ನಡೆಸಿದೆ.
2019 ರಲ್ಲಿ ಯಮೀನ್ ವಿರುದ್ಧದ ಭ್ರಷ್ಟಾಚಾರದ ಆರೋಪ ಸಾಬೀತಾಗಿದ್ದರಿಂದ ಆತನಿಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು. ಡಿ.2021 ರಲ್ಲಿ ಮಾಲ್ಡೀವ್ಸ್ ನ ಸುಪ್ರೀಂ ಕೋರ್ಟ್ ನ ತೀರ್ಪಿನ ಹಿನ್ನೆಲೆಯಲ್ಲಿ ಯಮೀನ್ ನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯ ಬಳಿಕ ಇಂಡಿಯಾ ಔಟ್ ಎಂಬ ಭಾರತ ದ್ವೇಷಿ ಅಭಿಯಾನ ಚುರುಕು ಪಡೆದುಕೊಂಡಿತ್ತು.
ಯಮೀನ್ ಅಧಿಕಾರದಲ್ಲಿದ್ದಾಗ ಚೀನಾಗೆ ಹೆಚ್ಚಿನ ಆದ್ಯತೆ ಹಾಗೂ ಭಾರತದೆಡೆಗೆ ಹಗೆತನವನ್ನು ಉತ್ತೇಜಿಸುತ್ತಿದ್ದರು. ಈ ದ್ವೇಷ ಅಭಿಯಾನದ ಪರಿಣಾಮವಾಗಿ ಇಬ್ಬರು ಭಾರತೀಯ ಮೂಲದ ಶಿಕ್ಷಕರಿಗೆ ರಸ್ತೆಗಳಲ್ಲಿ ಕಿರುಕುಳ ನೀಡಲಾಗಿತ್ತು.
ಈಗ ಈ ಅಭಿಯಾನದಿಂದ ತನ್ನ ವಿದೇಶಾಂಗ ನೀತಿಗೆ ಪೆಟ್ಟು ಬೀಳಬಹುದು, ತನ್ನ ಹಿತಾಸಕ್ತಿಗೆ ಧಕ್ಕೆ ಉಂಟಾಗಬಹುದು ಎಂದು ಎಚ್ಚೆತ್ತುಕೊಂಡಿರುವ ಮಾಲ್ಡೀವ್ಸ್ ಭಾರತ ವಿರೋಧಿ ಇಂಡಿಯಾ ಔಟ್ ಅಭಿಯಾನದ ವಿರುದ್ಧ ಕಾನೂನು ರೂಪಿಸಲು ಚಿಂತನೆ ನಡೆಸಿದೆ. ಇದಕ್ಕೆ ಪೂರಕವೆಂಬಂತೆ ಮಾಲ್ಡೀವ್ಸ್ ಸಂಸತ್ ನ ಸ್ಪೀಕರ್ ಹಾಗೂ ಮಾಜಿ ಅಧ್ಯಕ್ಷರಾದ ಮೊಹಮ್ಮದ್ ನಶೀದ್ ಅಭಿಯಾನದ ವಿರುದ್ಧ ಮಾತನಾಡಿದ್ದರು. "ಭಾರತ ಮಾಲ್ಡೀವ್ಸ್ ಜೊತೆಗೆ ಅತಿ ಹೆಚ್ಚು ಹೊಂದಿಕೊಳ್ಳುವ ರಾಷ್ಟ್ರವಾಗಿದೆ. ಮಾಲ್ಡೀವ್ಸ್ ನಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬಹುದು, ಭಾರತ ಮೊದಲು ಎಂಬ ನಮ್ಮ ದೇಶದ ವಿದೇಶಾಂಗ ನೀತಿ ಮುಂದುವರೆಯಲಿದೆ ಎಂದು ತಮ್ಮ ಇತ್ತೀಚಿನ ಶ್ರೀಲಂಕಾ ಭೇಟಿ ವೇಳೆ ಅವರು ಹೇಳಿದ್ದರು.
ಅಧ್ಯಕ್ಷ ಇಬ್ರಾಹಿಮ್ ಮೊಹಮ್ಮದ್ ಸೊಲಿಹ್ ನೇತೃತ್ವದ ಮಾಲ್ಡಿವಿಯನ್ ಡೆಮಾಕ್ರೆಟಿಕ್ ಪಕ್ಷ (ಎಂಡಿಪಿ) ಇಂಡಿಯಾ ಔಟ್ ಅಭಿಯಾನವನ್ನು ಅಪರಾಧಗೊಳಿಸುವ ಕಾನೂನಿನ ಕರಡನ್ನು ಸಿದ್ಧಪಡಿಸುತ್ತಿದೆ. ಈ ಅಭಿಯಾನದಲ್ಲಿ ತೊಡಗಿಕೊಂಡರೆ ಅಥವಾ ಮಾಲ್ಡೀವ್ಸ್ ನ ವಿದೇಶಾಂಗ ನೀತಿಗೆ ಧಕ್ಕೆ ಉಂಟಾಗುವ ರೀತಿ ನಡೆದುಕೊಂಡವರ ವಿರುದ್ಧ ಕ್ರಮ ಕೈಗೊಂಡು ಅಂತಹವರಿಗೆ 20,000 ಮಾಲ್ಡೀವಿಯನ್ ರುಫಿಯನ್ ದಂಡ, 6 ತಿಂಗಳ ಕಾಲ ಜೈಲು ಅಥವಾ ಒಂದು ವರ್ಷಗಳ ಕಾಲ ಗೃಹ ಬಂಧನ ವಿಧಿಸುವ ಸಾಧ್ಯತೆ ಇದೆ.