ಮಂಗಳೂರು: ಅಹ್ಮದಾಬಾದ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾದ ವಿವಿಧ ರಾಜ್ಯಗಳ ಒಟ್ಟು 38 ಮಂದಿಗೆ ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಶೂಕ್ರವಾರ(ಫೆ.18) ಮರಣದಂಡನೆ ಶಿಕ್ಷೆ ವಿಧಿಸಿದ್ದು, ಅದರಲ್ಲಿ ಮಂಗಳೂರಿನ ಸಯ್ಯದ್ ಮೊಹಮ್ಮದ್ ನೌಷಾದ್ ಹಾಗೂ ಅಹ್ಮದ್ ಬಾವ ಕೂಡ ಸೇರಿದ್ದಾರೆ.
ಮಂಗಳೂರು: ಅಹ್ಮದಾಬಾದ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾದ ವಿವಿಧ ರಾಜ್ಯಗಳ ಒಟ್ಟು 38 ಮಂದಿಗೆ ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಶೂಕ್ರವಾರ(ಫೆ.18) ಮರಣದಂಡನೆ ಶಿಕ್ಷೆ ವಿಧಿಸಿದ್ದು, ಅದರಲ್ಲಿ ಮಂಗಳೂರಿನ ಸಯ್ಯದ್ ಮೊಹಮ್ಮದ್ ನೌಷಾದ್ ಹಾಗೂ ಅಹ್ಮದ್ ಬಾವ ಕೂಡ ಸೇರಿದ್ದಾರೆ.
2008ರ ಜುಲೈ 28ರಂದು ಗುಜರಾತಿನ ಅಹ್ಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ 56 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮಾಸ್ಟರ್ ಮೈಂಡ್‌ಗಳಾದ ಯಾಸಿನ್ ಭಟ್ಕಳ ಹಾಗೂ ರಿಯಾಜ್ ಭಟ್ಕಳನ ನಿಕಟವರ್ತಿಯಾಗಿದ್ದ ನೌಷಾದ್ ಮಂಗಳೂರಿನ ಪಾಂಡೇಶ್ವರದ ಸುಭಾಷ್‌ನಗರದಲ್ಲಿ ವಾಸಿಸುತ್ತಿದ್ದ. ಪೊಲೀಸರು ಬಲೆ ಬೀಸಿ 2008ರ ಅಕ್ಟೋಬರ್ 3ರಂದು ಮುಂಜಾನೆ ಆತನನ್ನು ಬಂಧಿಸಿದ್ದರು. ಆತನ ಜತೆಗೆ ಉಳ್ಳಾಲದಿಂದ ಮೊಹಮ್ಮದ್ ಅಲಿ ಹಾಗೂ ಜಾವಿದ್ ಅಲಿ, ಹಳೆಯಂಗಡಿಯ ಅಹ್ಮದ್ ಬಾವ ಎಂಬುವರನ್ನು ಬಂಧಿಸಲಾಗಿತ್ತು.
ನೌಷಾದ್‌ನ ಸುಭಾಷ್‌ನಗರದ ಮನೆ ಐಎಂ ಉಗ್ರರು ಸಮಾಲೋಚನೆ ನಡೆಸುವ ತಾಣವಾಗಿತ್ತು. 2008ರಲ್ಲಿ ಆತನ ಬಂಧನದ ಜತೆಗೆ ಜಿಹಾದಿ ಸಾಹಿತ್ಯ, ಕಚ್ಚಾ ಬಾಂಬ್, ಹಾರ್ಡ್ ಡಿಸ್ಕ್, ಮೊಬೈಲ್ ಇತ್ಯಾದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ನೌಷಾದ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಆತನಿಗೆ ಸರ್ಕಿಟ್ ತಯಾರಿಕೆ ಗೊತ್ತಿತ್ತು. ಅಮೋನಿಯಂ ನೈಟ್ರೇಟ್ ಬಳಸಿ ಸರ್ಕಿಟ್ ಜೋಡಿಸಿದ್ದನ್ನು ಸೂರತ್‌ಗೆ ಕೊಂಡೊಯ್ಯಲಾಗುತ್ತಿತ್ತು. ಅಲ್ಲಿ ಇಕ್ಬಾಲ್ ಭಟ್ಕಳ್ ಎಂಬ ಉಗ್ರ ಡೆಟೋನೇಟರ್‌ಗಳನ್ನು ಜೋಡಿಸಿ ಸ್ಫೋಟಕ್ಕೆ ಬಳಸುತ್ತಿದ್ದ ಎನ್ನುವುದು ಹಿಂದೆ ವಿಚಾರಣೆಯಲ್ಲಿ ಬಯಲಾಗಿತ್ತು.
ಇವರ ವಿರುದ್ಧ ಅಹ್ಮದಾಬಾದ್ ಮತ್ತು ಸೂರತ್‌ಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಆರೋಪವಿತ್ತು. ಮಂಗಳೂರಿನ ಕೋರ್ಟ್ ಈಗಾಗಲೇ ನೌಷಾದ್ ಹಾಗೂ ಅಹ್ಮದ್ ಬಾವ ಎಂಬವರನ್ನು ದೋಷಿ ಎಂದು ಘೋಷಿಸಿತ್ತು. ಈಗ ಅಹ್ಮದಾಬಾದ್ ನ್ಯಾಯಾಲಯವೂ ಒಟ್ಟು 38 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.