ಶಹಜಹಾನ್‌ಪುರ: ಉತ್ತರ ಪ್ರದೇಶ ವಿಧಾನಸಭೆಗೆ ಸೋಮವಾರ ನಡೆದ ಎರಡನೇ ಹಂತದ ಚುನಾವಣೆ ನಡೆದಿದ್ದು, ತಿಲ್ಹಾರ್ ಕ್ಷೇತ್ರದಲ್ಲಿ ಮತದಾನದ ವೇಳೆ ನಡೆದ ವಿವಾದಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ(ಎಸ್ ಪಿ)ದ ಬೂತ್ ಏಜೆಂಟ್‌ನನ್ನು ಪ್ರತಿಸ್ಪರ್ಧಿ ಗುಂಪೊಂದು ಮಂಗಳವಾರ ಇಲ್ಲಿಯ ಹಳ್ಳಿಯೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಓರ್ವ ಗ್ರಾಮಸ್ಥರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಬೂತ್ ಏಜೆಂಟ್ ಸುಧೀರ್ ಕುಮಾರ್(20) ಅವರು ಮಂಗಳವಾರ ಬೆಳಗ್ಗೆ ವಿಕ್ರಮಪುರ ಚಕೋರಾ ಗ್ರಾಮದಲ್ಲಿ ಶೌಚಾಲಯಕ್ಕೆ ಹೋಗುತ್ತಿದ್ದಾಗ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಸಂಜಯ್ ಕುಮಾರ್ ಅವರು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಗ್ರಾಮಸ್ಥರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ರಾತ್ರಿ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ತಿಲ್ಹಾರ್ ಕ್ಷೇತ್ರದಲ್ಲಿ ಮತ ಚಲಾಯಿಸುವ ವಿಚಾರದಲ್ಲಿ ಕುಮಾರ್ ಮತ್ತು ಗ್ರಾಮದ ಪ್ರತಿಸ್ಪರ್ಧಿ ಗುಂಪಿನ ನಡುವೆ ವಾಗ್ವಾದ ನಡೆದಿತ್ತು ಎಂದು ಅವರು ಹೇಳಿದ್ದಾರೆ.
ನಿಗೋಹಿ ಪ್ರದೇಶದಲ್ಲಿ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.