ಬಹುಕೋಟಿ ಮೌಲ್ಯದ ಕಂಪ್ಯೂಟರ್ ಚಿಪ್‌ಗಳ ಕಳವು ಪ್ರಕರಣದಲ್ಲಿ ಪೊಲೀಸರ ನಡೆಯು ಪ್ರಶ್ನಾರ್ಹವಾಗಿದೆ
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ದೇಶದ ಎಲ್ಲ ನಾಗರಿಕರಿಗೂ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಆಧಾರ್) ನೀಡುತ್ತಿದೆ.
ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವ ವಿಚಾರ ದಲ್ಲಿ ನಗರದ ಪೊಲೀಸರ ನಡೆಯು ಪ್ರಶ್ನಾರ್ಹವಾಗಿದೆ.
ಇದು ಯಾವುದೋ ಒಂದು ಸಾಮಾನ್ಯ ಪ್ರಕರಣ ಅಲ್ಲ. ದಿನದ 24 ಗಂಟೆಗಳ ಕಾಲವೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಕಮಾಂಡೊ ಗಳ ಭದ್ರತೆಯಲ್ಲಿರುವ ಮತ್ತು ಸಿ.ಸಿ. ಟಿ.ವಿ. ಕ್ಯಾಮೆರಾಗಳ ನಿರಂತರ ಕಣ್ಗಾವಲು ಇರುವ ಆಧಾರ್ ದತ್ತಾಂಶ ಕೇಂದ್ರದಿಂದ ಕಂಪ್ಯೂಟರ್ ಚಿಪ್‌ಗಳನ್ನು ಕದ್ದೊಯ್ಯಲಾಗಿದೆ. ಸ್ಮಾರ್ಟ್ ಕಾರ್ಡ್ ಗುರುತಿನ ಚೀಟಿ ಹೊಂದಿ ರುವವರಷ್ಟೇ ಪ್ರವೇಶಿಸಬಹುದಾದ ಅತಿಭದ್ರತಾ ವಲಯದಲ್ಲೇ ಕೃತ್ಯ ನಡೆದಿದೆ. ಇಂತಹ ಪ್ರಕರಣದಲ್ಲಿ ದೂರು ದಾಖಲಾಗಿ ಐದು ತಿಂಗಳು ಕಳೆದರೂ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದಿಲ್ಲ. ಆರೋಪಿಗಳ ಸುಳಿವು ಪತ್ತೆಯಾಗಿಲ್ಲ ಎಂಬ ವರದಿಯೊಂದನ್ನು ನ್ಯಾಯಾಲಯದ ಮುಂದಿಟ್ಟು, ತನಿಖೆಗೆ ಹೆಚ್ಚಿನ ಕಾಲಾವಕಾಶ ಪಡೆದುಕೊಳ್ಳುವುದಕ್ಕೆ ಪೊಲೀಸರು ತಮ್ಮ ಪ್ರಯತ್ನವನ್ನು ಸೀಮಿತಗೊಳಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಒಳಗಿನವರ ಕೈವಾಡದಿಂದಲೇ ಕೃತ್ಯ ನಡೆದಿರುವ ಸಾಧ್ಯತೆ ಹೆಚ್ಚು. ದೀರ್ಘಕಾಲದಿಂದ ಈ ರೀತಿ ನೂರಾರು ಕೋಟಿ ರೂಪಾಯಿ ಮೌಲ್ಯದ ಚಿಪ್‌ಗಳನ್ನು ಕಳವು ಮಾಡಿ, ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳ್ಳಸಾಗಣೆ ಮಾಡಿರಬಹುದಾದ ಶಂಕೆಯೂ ಇದೆ. ಈ ಎಲ್ಲವನ್ನೂ ಪತ್ತೆಹಚ್ಚಬೇಕಾದ ಹೊಣೆಗಾರಿಕೆ ಪೊಲೀಸ್ ಇಲಾಖೆಯ ಮೇಲಿದೆ. ಆದರೆ, ದೂರು ಕೊಟ್ಟವರು ಸೇರಿದಂತೆ ಕೆಲವರ ವಿಚಾರಣೆಯ ಹೊರತಾಗಿ ತನಿಖೆ ಮುಂದಡಿ ಇಟ್ಟಿಲ್ಲ ಎಂಬುದನ್ನು ಪೊಲೀಸ್ ಇಲಾಖೆಯ ಮಾಹಿತಿಗಳೇ ದೃಢಪಡಿಸುತ್ತವೆ. ಆಧಾರ್ ದತ್ತಾಂಶ ಕೇಂದ್ರದ ಅತಿಭದ್ರತಾ ವಲಯವನ್ನು ಪ್ರವೇಶಿಸಿ ಕಂಪ್ಯೂಟರ್ ಚಿಪ್‌ಗಳನ್ನು ಕಳವು ಮಾಡಿರುವ ವಿಚಾರವನ್ನು ಹಗುರವಾಗಿ ಪರಿಗಣಿಸುವುದು ಸರಿಯಲ್ಲ. ಇಂತಹ ನಡವಳಿಕೆಯು ಮುಂದೊಂದು ದಿನ ದುಷ್ಕರ್ಮಿಗಳು ಇಡೀ ದತ್ತಾಂಶ ಸಂಗ್ರಹಕ್ಕೆ ಹಾನಿ ಮಾಡಲು ಕಾರಣವಾಗಬಹುದು. ಇದು ತಮ್ಮ ವ್ಯಾಪ್ತಿಗೆ ಮೀರಿದ ಪ್ರಕರಣ ಅಥವಾ ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ವಹಿಸುವುದು ಸೂಕ್ತ ಎಂದು ನಗರದ ಪೊಲೀಸರು ಭಾವಿಸಿದ್ದಲ್ಲಿ ಆ ಕುರಿತು ಸೂಕ್ತ ಶಿಫಾರಸುಗಳನ್ನು ಸಕಾಲದಲ್ಲಿ ಮಾಡಬೇಕಿತ್ತಲ್ಲವೇ? ಕೊನೇಪಕ್ಷ ಹಿರಿಯ ಅಧಿಕಾರಿಗಳ ತಂಡವೊಂದಕ್ಕೆ ತನಿಖೆಯ ಹೊಣೆ ನೀಡುವ ಕೆಲಸವನ್ನೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಮಾಡಿಲ್ಲ. ಈವರೆಗೂ ಈ ಬಗ್ಗೆ ಯೋಚಿಸದೇ ಇರುವುದು ಅನುಮಾನಕ್ಕೆ ಎಡೆಮಾಡಿದೆ. ಇಂತಹ ಗಂಭೀರ ಪ್ರಕರಣವೊಂದರ ತನಿಖೆಯ ವಿಚಾರದಲ್ಲಿ ಪೊಲೀಸರು ಇನ್ನಾದರೂ ಸರಿಯಾಗಿ ಯೋಚಿಸಿ, ಕ್ರಮ ಕೈಗೊಳ್ಳಬೇಕಿದೆ. ತನಿಖೆಯಲ್ಲಿನ ವಿಳಂಬವು ಆಧಾರ್ ದತ್ತಾಂಶ ಸಂಗ್ರಹ ಮತ್ತು ಸಂರಕ್ಷಣೆ ವ್ಯವಸ್ಥೆಯನ್ನು ದುರ್ಬಲಗೊಳಿಸುವುದಕ್ಕೆ ಕಾರಣವಾಗಬಾರದು. ಕಳ್ಳತನ ಮಾಡಿದವರನ್ನು ಪತ್ತೆಹಚ್ಚುವುದರ ಜತೆಯಲ್ಲೇ ಭದ್ರತಾ ಲೋಪಕ್ಕೆ ಕಾರಣವಾದ ಅಂಶಗಳು ಮತ್ತು ಕೃತ್ಯಕ್ಕೆ ಸಹಕರಿಸಿದವರನ್ನೂ ಬಯಲಿಗೆ ತರಬೇಕು. ಪ್ರಕರಣದ ತನಿಖೆಗೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತಂಡವೊಂದನ್ನು ನೇಮಿಸಿ, ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಬೇಕು. ಅದು ಅಸಾಧ್ಯ ಎನಿಸಿದಲ್ಲಿ ಪ್ರಕರಣವನ್ನು ಕೇಂದ್ರದ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸುವ ನಿರ್ಧಾರವನ್ನು ರಾಜ್ಯ ಸರ್ಕಾರವೇ ಮಾಡಬೇಕು.