ಕೀವ್: ಉಕ್ರೇನ್ ನಲ್ಲಿ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾ ಇದೀಗ ಮಾತುಕತೆಗೆ ಉಕ್ರೇನ್ ಅನ್ನು ಮಾತುಕತೆಗೆ ಆಹ್ವಾನಿಸಿದೆ. ಈ ಆಹ್ವಾನವನ್ನು ತಿರಸ್ಕರಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಾನು ಮಾತುಕತೆಗೆ ಸಿದ್ಧ ಆದರೆ ಬೆಲಾರಸ್ ನಲ್ಲಿ ಬೇಡ ಎಂದು ಹೇಳಿದ್ದಾರೆ.
ಅದಾಗಲೇ ರಷ್ಯಾ ನಿಯೋಗ ಬೆಲಾರಸ್ ಗೆ ಆಗಮಿಸಿದೆ. ನಾವು ಶಾಂತಿ ಮಾತುಕತೆಗೆ ಸಿದ್ಧ ಆದರೆ ಮೊದಲು ಯುದ್ಧ ನಿಲ್ಲಿಸಿ. ಇನ್ನು ಉಕ್ರೇನ್ ಮೇಲೆ ಯುದ್ಧ ಮಾಡಲು ಬೆಲಾರಸ್ ಅನ್ನು ರಷ್ಯಾ ಬಳಸಿಕೊಳ್ಳುತ್ತಿರುವುದರಿಂದ ಅಲ್ಲಿ ಮಾತುಕತೆಗೆ ನಾವು ಸಿದ್ಧವಾಗಿಲ್ಲ ಎಂದು ಹೇಳಿರುವ ಝೆಲೆನ್ಸ್ಕಿ, ವಾರ್ಸಾ, ಬ್ರಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂಬುಲ್ ಮತ್ತು ಬಕು ಮೊದಲ ಪ್ರದೇಶಗಳಲ್ಲಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ ಸೇನಾ ಕಾರ್ಯಾಚರಣೆಯು ನಾಲ್ಕನೇ ದಿನಕ್ಕೆ ಕಾಲಿಡುತ್ತಿದ್ದಂತೆ ಉಕ್ರೇನ್ ರಷ್ಯಾದ ಆಕ್ರಮಣದ ವಿರುದ್ಧ ಹೋರಾಟವನ್ನು ಮುಂದುವರೆಸಿದೆ. ಉಕ್ರೇನ್‌ನ ಎರಡನೇ ಅತಿದೊಡ್ಡ ನಗರದಲ್ಲಿ ಗ್ಯಾಸ್ ಪೈಪ್‌ಲೈನ್ ಅನ್ನು ಸ್ಫೋಟಿಸಿದ ನಂತರ ರಷ್ಯಾದ ಪಡೆಗಳು ಖಾರ್ಕಿವ್‌ಗೆ ನುಗುತ್ತಿದೆ.
ಉಕ್ರೇನ್‌ನ ದಕ್ಷಿಣ ಮತ್ತು ಆಗ್ನೇಯದಲ್ಲಿರುವ ಇನ್ನೂ ಎರಡು ನಗರಗಳನ್ನು ರಷ್ಯಾ ವಶಪಡಿಸಿಕೊಂಡಿದೆ. ಉಕ್ರೇನ್‌ನಲ್ಲಿ ಇದುವರೆಗೆ ಸುಮಾರು 200 ನಾಗರಿಕರು ಸಾವನ್ನಪ್ಪಿದ್ದಾರೆ. 150,000ಕ್ಕೂ ಹೆಚ್ಚು ಜನರು ಪೋಲೆಂಡ್, ಮೊಲ್ಡೊವಾ ಸೇರಿದಂತೆ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ.