ಮುಂಬೈ : ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶೀಘ್ರದಲ್ಲಿಯೇ ಪ್ರಕಟಿಸಲಿದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ ರಾವ್ ಗುರುವಾರ ತಿಳಿಸಿದರು.
ಮುಂಬೈ : ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶೀಘ್ರದಲ್ಲಿಯೇ ಪ್ರಕಟಿಸಲಿದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ ರಾವ್ ಗುರುವಾರ ತಿಳಿಸಿದರು.
ಆನ್‌ಲೈನ್ ವೇದಿಕೆಗಳು, ಸ್ಮಾರ್ಟ್‌ಫೋನ್ ಆಯಪ್‌ಗಳು ಸೇರಿದಂತೆ ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ಆರ್‌ಬಿಐ ರಚಿಸಿದ್ದ ಕಾರ್ಯಕಾರಿ ಸಮಿತಿಯು 2021ರ ನವೆಂಬರ್‌ನಲ್ಲಿ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ.
ಈ ಶಿಫಾರಸುಗಳ ಬಗ್ಗೆ ಸಾರ್ವಜನಿಕರು ಅಭಿಪ್ರಾಯ ತಿಳಿಸಬೇಕು ಎಂದು ಆರ್‌ಬಿಐ ಕೋರಿತ್ತು. 'ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸ್ವೀಕರಿಸಲಾಗಿದ್ದು, ಅವನ್ನು ಆಧರಿಸಿ ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರೂಪಿಸುತ್ತೇವೆ. ಆ ಕೆಲಸ ಪ್ರಗತಿಯಲ್ಲಿ ಇದೆ. ನಿಯಮಗಳು ಶೀಘ್ರದಲ್ಲಿಯೇ ಬರಲಿವೆ' ಎಂದು ರಾವ್ ಅವರು ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಡಿಜಿಟಲ್ ವೇದಿಕೆಗಳ ಮೂಲಕ ಸಾಲ ವಿತರಣೆ ಮಾಡುವ 600 ಅಕ್ರಮ ಆಯಪ್‌ಗಳು ದೇಶದಲ್ಲಿ ಇವೆ. ಇವು 81 ಬೇರೆ ಬೇರೆ ಆಯಪ್ ಸ್ಟೋರ್‌ಗಳಲ್ಲಿ ಲಭ್ಯವಿವೆ ಎಂದು ಆರ್‌ಬಿಐ ರಚಿಸಿದ್ದ ಕಾರ್ಯಕಾರಿ ಸಮಿತಿ ಹೇಳಿತ್ತು. ಆಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್ ಬಳಕೆ ಮಾಡುವವರಿಗೆ ದೇಶದಲ್ಲಿ ಇಂತಹ ಒಟ್ಟು 1,100 ಆಯಪ್‌ಗಳು ಲಭ್ಯವಿವೆ ಎಂಬ ಮಾತು ಸಮಿತಿಯ ವರದಿಯಲ್ಲಿ ಇದೆ.