ನವದೆಹಲಿ: ರಷ್ಯಾ ಪೂರ್ಣ ಪ್ರಮಾಣದಲ್ಲಿ ಆಕ್ರಮಣ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ನೆರವಾಗುವಂತೆ ಉಕ್ರೇನ್ ಮನವಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ವಿಶ್ವದ ಬಲಿಷ್ಠ ನಾಯಕರಲ್ಲಿ ಒಬ್ಬರಾಗಿದ್ದು, ಭಾರತ ತನ್ನ ಜಾಗತಿಕ ಪಾತ್ರವನ್ನು ಪೂರ್ಣ ಪ್ರಮಾಣದಲ್ಲಿ ವಹಿಸಿಕೊಳ್ಳುವಂತೆ ಭಾರತದಲ್ಲಿನ ಉಕ್ರೇನ್ ರಾಯಭಾರಿ ಡಾ. ಇಗೊರ್ ಪೊಲಿಖಾ ಹೇಳಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ನಾವು ಭಾರತದ ಬೆಂಬಲವನ್ನು ಕೋರುತ್ತೇವೆ. ಪ್ರಜಾಸತಾತ್ಮಕ ರಾಜ್ಯದ ವಿರುದ್ಧದ ಆಕ್ರಮಣ ನೀತಿ ಕೊನೆಯಾಗಲು ಭಾರತ ತನ್ನ ಜಾಗತಿಕ ಪಾತ್ರವನ್ನು ಸಂಪೂರ್ಣವಾಗಿ ವಹಿಸಿಕೊಳ್ಳಬೇಕು ಎಂದಿದ್ದಾರೆ.
ವಿಶ್ವದ ಯಾರೆಲ್ಲ ನಾಯಕರ ಮಾತನ್ನು ಪುಟಿನ್ ಕೇಳಬಹುದು ಎಂಬುದು ನನಗೆ ಗೊತ್ತಿಲ್ಲ. ಆದರೆ, ಮೋದಿ ಗಟ್ಟಿ ಧ್ವನಿಯಲ್ಲಿ ನಮಗೆ ವಿಶ್ವಾಸವಿದೆ. ಪುಟಿನ್ ತಮ್ಮ ಯೋಚನೆಯನ್ನು ಬದಲಾಯಿಸಬಹುದು. ಭಾರತದಿಂದ ಹೆಚ್ಚಿನ ಸಹಕಾರವನ್ನು ನಿರೀಕ್ಷಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಇತಿಹಾಸದಲ್ಲಿನ ಅನೇಕ ಸಂದರ್ಭಗಳಲ್ಲಿ ಭಾರತ ಶಾಂತಿಪಾಲನೆ ಮಾಡಿದೆ. ಈ ಯುದ್ಧವನ್ನು ನಿಲ್ಲಿಸಲು ಭಾರತದ ಗಟ್ಟಿ ಧ್ವನಿಯನ್ನು ನಾವು ಕೇಳುತ್ತೇವೆ. ಯುದ್ಧವನ್ನು ನಿಲ್ಲಿಸಲು ಭಾರತದ ನಾಯಕತ್ವದಿಂದ ಸಹಕಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಅವರು ಎಎನ್ ಐ ಸುದ್ದಿಸಂಸ್ಥೆಗೆ ಹೇಳಿದರು.