ನವದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವೆ ಉದ್ವಿಗ್ನತೆ ತಾರಕಕ್ಕೇರಿರುವ ಸಂದರ್ಭದಲ್ಲೇ ಇಸ್ರೇಲ್ ಸಿರಿಯಾದ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ದಾಳಿಯಲ್ಲಿ ಹಲವು ಸೇನಾ ನೆಲೆಗಳು ಧ್ವಂಸಗೊಂಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಜಾಗತಿಕ ರಾಷ್ಟ್ರಗಳು ಬೇರೆಡೆ ಗಮನ ಕೇಂದ್ರಿಕರಿಸಿದಾಗ ಇಸ್ರೇಲ್ ಇಂತಹ ದುಸ್ಸಾಹಸಕ್ಕೆ ಕೈ ಹಾಕುವ ತಂತ್ರವನ್ನು ಅನುಸರಿಸಿಕೊಂಡು ಬಂದಿದೆ. ಸದ್ಯ ಇಸ್ರೇಲ್ ಮಾಡಿರುವ ದಾಳಿಯಿಂದಾಗಿ ಸಿರಿಯಾದಲ್ಲಿ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಕ್ಷಿಪಣಿಗಳನ್ನು ಇಸ್ರೇಲ್ ಆಕ್ರಮಿತ ಸಿರಿಯಾ ಪ್ರದೇಶವಾದ ಗೋಲನ್ ಹೈಟ್ಸ್‌ನಿಂದ ಹಾರಿಸಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಸಿರಿಯಾದ ಮಿಲಿಟರಿ ಅಧಿಕಾರಿಯನ್ನು ಉಲ್ಲೇಖಿಸಿ ಸ್ಟೇಟ್ ಟಿವಿ ವರದಿ ಮಾಡಿದೆ. ಅಲ್ಲದೆ ಸಮೀಪದ ಕುನೇತ್ರಾ ಪಟ್ಟಣದ ಸುತ್ತಮುತ್ತಲೂ ದಾಳಿಗಳು ನಡೆದಿವೆ. ಮಧ್ಯರಾತ್ರಿಯ ವೇಳೆ ದಿಢೀರ್ ದಾಳಿ ಬಳಿಕ ಸೇನಾ ನೆಲೆಗಳು ಧ್ವಂಸಗೊಂಡಿವೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಟೇಟ್ ಟಿವಿ ಹೇಳಿದೆ.
ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡದ ಇಸ್ರೇಲ್
ಸಿರಿಯಾ ಮೇಲಿನ ದಾಳಿಯ ಬಗ್ಗೆ ಇಸ್ರೇಲ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎರಡೂ ರಾಷ್ಟ್ರಗಳ ಮಧ್ಯೆ ದಶಕದಿಂದ ಸಿರಿಯಾದ ಸರ್ಕಾರಿ ನಿಯಂತ್ರಿತ ಭಾಗಗಳನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್ ನೂರಾರು ದಾಳಿಗಳನ್ನು ನಡೆಸಿದೆ. ಆದರೆ ಇಂತಹ ಕಾರ್ಯಾಚರಣೆಗಳನ್ನು ಬೆರಳೆಣೆಕೆ ಸಂಖ್ಯೆಯಲ್ಲಿ ಮಾತ್ರ ಇಸ್ರೇಲ್ ಒಪ್ಪಿಕೊಂಡಿದೆ.
ಗೋಲನ್ ಹೈಟ್ಸ್ ಇಸ್ರೇಲ್‌ನ ಕೈವಶ
ಇಸ್ರೇಲ್ 1967ರ ಯುದ್ಧದಲ್ಲಿ ಸಿರಿಯಾದಿಂದ ಗೋಲನ್ ಹೈಟ್ಸ್ ಅನ್ನು ವಶಪಡಿಸಿಕೊಂಡಿತು. ಬಳಿಕ ಸಂಪೂರ್ಣ ಪ್ರದೇಶವನ್ನು ಆಕ್ರಮಿಸಿತು. ಟ್ರಂಪ್ ಆಡಳಿತವು ಈ ಪ್ರದೇಶವನ್ನು ಇಸ್ರೇಲ್‌ನ ಭಾಗವೆಂದು ಘೋಷಿಸಿದ್ರೂ ವಿಶ್ವದ ಹೆಚ್ಚಿನ ದೇಶಗಳು ಇದಕ್ಕೆ ಮಾನ್ಯತೆ ನೀಡುವುದಿಲ್ಲ.