ನವದೆಹಲಿ:ನೆರೆಯ ದೇಶಗಳು ಈಗಲೂ ಪೋಲಿಯೊ ಮುಕ್ತವಾಗಿಲ್ಲ,ಹೀಗಾಗಿ ಭಾರತವು ಜಾಗರೂಕವಾಗಿರುವುದು ಮತ್ತು ಕಾಯಿಲೆಯ ವಿರುದ್ಧ ತನ್ನ ಲಸಿಕೆ ಕಾರ್ಯಕ್ರಮವನ್ನು ಮುಂದುವರಿಸುವುದು ಅಗತ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಶನಿವಾರ ಇಲ್ಲಿ ಹೇಳಿದರು.
ಸಚಿವಾಲಯದಲ್ಲಿ ಐದು ವರ್ಷದ ಕೆಳಗಿನ ಮಕ್ಕಳಿಗೆ ಲಸಿಕೆ ಹನಿಗಳನ್ನು ಹಾಕುವ ಮೂಲಕ ರಾಷ್ಟ್ರೀಯ ಪೋಲಿಯೊ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಅವರು,ಮುಂಬರುವ ತಿಂಗಳುಗಳಲ್ಲಿ ಐದು ವರ್ಷಕ್ಕಿಂತ ಕೆಳಗಿನ 15 ಕೋಟಿಗೂ ಅಧಿಕ ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.
'ಪೋಲಿಯೊ ವಿರುದ್ಧ ಭಾರತದ ವ್ಯೆಹಾತ್ಮಕ ಹೋರಾಟವು ಲಸಿಕೆಯಿಂದ ತಡೆಗಟ್ಟಬಹುದಾದ ಕಾಯಿಲೆಗಳ ವಿರುದ್ಧ ದೇಶದ ಸಾರ್ವಜನಿಕ ಆರೋಗ್ಯ ನೀತಿಯ ಯಶೋಗಾಥೆಯಾಗಿದೆ. ನಾವು ಜಾಗರೂಕತೆಯನ್ನು ಮುಂದುವರಿಸಬೇಕು ಮತ್ತು ಐದು ವರ್ಷಕ್ಕಿಂತ ಕೆಳಗಿನ ಪ್ರತಿ ಮಗುವಿಗೂ ಪೋಲಿಯೊ ಹನಿ ಹಾಕುವುದನ್ನು ಖಚಿತಪಡಿಸಿಕೊಳ್ಳಬೇಕು ' ಎಂದರು.ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಡಿ ಸಾರ್ವತ್ರಿಕ ಪ್ರತಿರಕ್ಷಣೆ ಕಾರ್ಯಕ್ರಮವು ಹೆಚ್ಚಿನ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ಹಿಂದೆಂದಿಗಿಂತಲೂ ಹೆಚ್ಚಿನ ಗಮನವನ್ನು ನೀಡುತ್ತಿದೆ ಮತ್ತು ನ್ಯುಮೊಕಾಕಲ್ ಕಾಂಜ್ಯುಗೇಟ್ ವ್ಯಾಕ್ಸಿನ್ (ಪಿಸಿವಿ),ರೋಟಾವೈರಸ್ ವ್ಯಾಕ್ಸಿನ್ ಮತ್ತು ಮೀಸಲ್ಸ್-ರುಬೆಲ್ಲಾ (ಎಂಆರ್) ವ್ಯಾಕ್ಸಿನ್‌ನಂತಹ ಹಲವಾರು ಹೊಸ ಲಸಿಕೆಗಳನ್ನು ಪರಿಚಯಿಸಿದೆ. ಮಕ್ಕಳಿಗೆ ಹೆಚ್ಚುವರಿ ರಕ್ಷಣೆಯನ್ನೊದಗಿಸಲು ಸರಕಾರವು ಚುಚ್ಚುಮದ್ದಿನ ಮೂಲಕ ನೀಡಬಹುದಾದ ನಿಷ್ಕ್ರಿಯ ಪೋಲಿಯೊ ಲಸಿಕೆಯನ್ನೂ ಅಭಿಯಾನದಲ್ಲಿ ಬಳಸುತ್ತಿದೆ ಎಂದರು.
'ಹೆಚ್ಚೆಚ್ಚು ಕಾಯಿಲೆಗಳಿಂದ ನಮ್ಮ ಮಕ್ಕಳನ್ನು ರಕ್ಷಿಸಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ,ಆದಾಗ್ಯೂ ಅಭಿಯಾನದಡಿಯ ಎಲ್ಲ ಲಸಿಕೆಗಳು ದೇಶದ ಪ್ರತಿಯೊಂದು ಮಗುವಿಗೂ ತಲುಪುವುದು ಮುಖ್ಯವಾಗಿದೆ 'ಎಂದು ಮಾಂಡವೀಯ ಹೇಳಿದರು.
ರಾಷ್ಟ್ರೀಯ ಪ್ರತಿರಕ್ಷಣೆ ದಿನಾಚರಣೆಯ ಮಹತ್ವಕ್ಕೆ ಒತ್ತು ನೀಡಿದ ಅವರು,'ನಮ್ಮ ಮಕ್ಕಳು ಆರೋಗ್ಯಯುತರಾಗಿದ್ದರೆ ಮಾತ್ರ ಸ್ವಸ್ಥ ಭಾರತ ಅಭಿಯಾನದ ಗುರಿಯನ್ನು ಸಾಧಿಸಬಹುದು. ಇಂತಹ ಮಾರಣಾಂತಿಕ ಕಾಯಿಲೆಗಳ ವಿರುದ್ಧ ನಮ್ಮ ಮಕ್ಕಳನ್ನು ರಕ್ಷಿಸುವುದು ಇಂದ್ರಧನುಷ ಅಭಿಯಾನ ಅಥವಾ ಪೋಲಿಯೊ ಲಸಿಕೆ ಆಂದೋಲನದ ಗುರಿಯಾಗಿದೆ ಎಂದರು. ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸುವಂತೆ ಎಲ್ಲ ಕುಟುಂಬಗಳಿಗೆ ತಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.
ರವಿವಾರ,ಫೆ. 27ರಂದು ದೇಶಾದ್ಯಂತ ರಾಷ್ಟ್ರೀಯ ಪೋಲಿಯೊ ಅಭಿಯಾನವು ನಡೆಯಲಿದೆ. ದೇಶಾದ್ಯಂತ ಏಳು ಲಕ್ಷಕ್ಕೂ ಅಧಿಕ ಬೂತ್‌ಗಳ ಮೂಲಕ ಮಕ್ಕಳಿಗೆ ಪೋಲಿಯೊ ಹನಿಗಳನ್ನು ಹಾಕಲಾಗುವುದು. ಸುಮಾರು 24 ಲಕ್ಷ ಸ್ವಯಂಸೇವಕರು ಮತ್ತು 1.5 ಲಕ್ಷ ಮೇಲ್ವಿಚಾರಕರು ಅಂದಾಜು 23.6 ಕೋ.ಮನೆಗಳಿಗೆ ಭೇಟಿ ನೀಡಲಿದ್ದಾರೆ.
ಭಾರತವು ಕಳೆದೊಂದು ದಶಕದಿಂದಲೂ ಪೋಲಿಯೊ ಮುಕ್ತವಾಗಿದೆ. ದೇಶದಲ್ಲಿ ಕೊನೆಯ ಪೋಲಿಯೊ ಪ್ರಕರಣ 2011,ಜ.13ರಂದು ವರದಿಯಾಗಿತ್ತು.