ನವದೆಹಲಿ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೊತೆ ಟೆಲಿವಿಷನ್ ಮೂಲಕ ಉಭಯ ದೇಶಗಳ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಬೇಕು ಎನ್ನುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಲೇವಡಿ ಮಾಡಿದ್ದಾರೆ.
ರಷ್ಯಾ ಪ್ರವಾಸಕ್ಕೂ ಮುನ್ನ ಅಲ್ಲಿನ ವಾಹಿನಿಯೊಂದಿಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಇಮ್ರಾನ್ ಖಾನ್, ಉಭಯ ದೇಶಗಳ ನಡುವೆ ಬಿಗುವಿನ ಪರಿಸ್ಥಿತಿ ಕಮ್ಮಿಯಾಗಬೇಕೆಂದರೆ ಪ್ರಧಾನಿ ಮೋದಿಯ ಜೊತೆಗೆ ಟಿವಿಯ ಮೂಲಕ ಚರ್ಚೆ ನಡೆಯಬೇಕು ಎಂದಿದ್ದರು.
ಪಾಕ್ ಪ್ರಧಾನಿಗಳ ಹೇಳಿಕೆಗೆ ಟ್ವೀಟ್ ಮೂಲಕ ವ್ಯಂಗ್ಯ ವಾಡಿರುವ ಶಶಿ ತರೂರ್, "ಯುದ್ದಕ್ಕಿಂತ ಮಾತುಕತೆಯ ಮೂಲಕ ಸಂಧಾನ ಎನ್ನುವ ನಿಮ್ಮ ಮಾತನ್ನು ಒಪ್ಪುತ್ತೇನೆ. ಆದರೆ, ಭಾರತದ ಟಿವಿಯ ಮೂಲಕ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ನಮ್ಮ ವಾಹಿನಿಗಳು ವಿಷಯಗಳನ್ನು ವಿಜ್ರುಂಭಿಸುತ್ತಾ ಪ್ರಸಾರ ಮಾಡುತ್ತವೆ, ಕೆಲವೊಂದು ಆಂಕರ್ ಗಳಂತೂ ತಮ್ಮ ಟಿಆರ್ಪಿಗಾಗಿ ಮೂರನೇ ಮಹಾಯುದ್ದ ನಡೆದರೂ ಸಂತೋಷ ಪಡುತ್ತಾರೆ"ಎಂದು ತರೂರ್ ಟ್ವೀಟ್ ಮಾಡಿದ್ದಾರೆ.ಶಶಿ ತರೂರ್ ಟ್ವೀಟಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. 'ಭಾರತದ ಕೆಲವೊಂದು ರಾಜಕಾರಣಿಗಳು, ಎರಡನೇ ಮಹಾಯುದ್ದದ ನಂತರ ಕೋಮು ದ್ವೇಷವನ್ನು ಸೃಷ್ಟಿಸಿ ದೇಶವನ್ನು ವಿಭಜಿಸಲು ಹುನ್ನಾರ ನಡೆಸುತ್ತಿದ್ದಾರೆ' ಈ ರೀತಿಯ ಪ್ರತಿಕ್ರಿಯೆ ಬಂದಿದೆ. 'ಟಿವಿ ಮೂಲಕ ಚರ್ಚೆಯು ಯಾವುದೇ ಸಮಸ್ಯೆಗಳಿಗೆ ಪರಿಹಾರ ನೀಡುವುದಿಲ್ಲ. ಆದಾಗ್ಯೂ, ಇಮ್ರಾನ್ ಖಾನ್ ನಮ್ಮ ದೇಶದ ನಿರೂಪಕರನ್ನು ಎದುರಿಸಲು ಸಮರ್ಥರಾದರೆ, ಅವರಿಗೆ ಪಾಕಿಸ್ತಾನದಲ್ಲಿ ಬೆಲೆ ಹೆಚ್ಚಾಗುತ್ತದೆ. ಯಾಕೆಂದರೆ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಪಾಕಿಸ್ತಾನದ ಪ್ರಧಾನಿಗಳನ್ನು ಅವಹೇಳನ ಮಾಡಲಾಗುತ್ತಿದೆ' ಎನ್ನುವ ಪ್ರತಿಕ್ರಿಯೆಯೂ ಶಶಿ ತರೂರ್ ಟ್ವೀಟಿಗೆ ಬಂದಿದೆ. "ನರೇಂದ್ರ ಮೋದಿ ಅವರೊಂದಿಗೆ ಟಿವಿಯಲ್ಲಿ ಚರ್ಚೆ ನಡೆಸಲು ನಾನು ಇಷ್ಟಪಡುತ್ತೇನೆ. ಈ ಬಗ್ಗೆ ಚರ್ಚೆಯಾದರೆ ಭಾರತ ಉಪಖಂಡದ ಒಂದು ಶತಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನಕಾರಿಯಾಗುತ್ತದೆ" ಎಂದು ಇಮ್ರಾನ್ ಖಾನ್ ರಷ್ಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.