ತಿರುವನಂತಪುರ: ರಾಜ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿದೆ.ಸರ್ಕಾರ ಜನರ ಪ್ರಾಣ, ಆಸ್ತಿ ರಕ್ಷಣೆ ಮಾಡಲಾಗದ ವ್ಯವಸ್ಥೆಯಾಗಿ ಮಾರ್ಪಟ್ಟಿದೆ ಎಂದು ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಆರೋಪಿಸಿದರು.
ಎಲ್ಲವೂ ಪ್ರತ್ಯೇಕ ಘಟನೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ವಿ.ಡಿ.ಸತೀಶನವರು ಇಂತಹ ‘ಪ್ರತ್ಯೇಕ ಘಟನೆ’ಯನ್ನು ನಿಯಮಿತವಾಗಿ ಟೀಕಿಸುತ್ತಿದ್ದರು. ಕೊಟ್ಟಾಯಂ ಜಿಲ್ಲೆಯಲ್ಲಿ ಯುವಕನೊಬ್ಬನನ್ನು ಕೊಂದು ಆತನ ಶವವನ್ನು ಠಾಣೆಯ ಮುಂದೆ ತಂದಾಗ ಪೊಲೀಸರು ಠಾಣೆಯ ಬಾಗಿಲು ಮುಚ್ಚಿ ಒಳಗೆ ಹೋಗಿದ್ದರು. ಎಸ್ಪಿಗಳ ನೇಮಕದ ಬಗ್ಗೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿಗಳು ನಿರ್ಧರಿಸುತ್ತಾರೆ. ಇದುವೇ ಸಮಸ್ಯೆಗಳಿಗೆ ಕಾರಣ ಎಂದು ವಿ.ಡಿ.ಸತೀಶನ್ ಹೇಳಿದರು.
ವಿ.ಡಿ.ಸತೀಶನ್ ಅವರಿಗೆ ಉತ್ತರಿಸಿದ ಮುಖ್ಯಮಂತ್ರಿ, ನೀವು ಕೊಟ್ಟಾಯಂ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದೀರಾ ಎಂದು ಪ್ರಶ್ನಿಸಿದರು. ಈ ವೇಳೆ ಇದರ ಕುರಿತು ಮಾತನಾಡುವಾಗ ಅಪಹಾಸ್ಯ ಮಾಡಬೇಡಿ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ ವಿ.ಡಿ.ಸತೀಶನ್ ಅವರು, ಇದು ಇಂದು ಕೇರಳ ಎದುರಿಸುತ್ತಿರುವ ಗಂಭೀರ ಸಮಸ್ಯೆಯಾಗಿದೆ ಎಂದು ತಿಳಿಸಿದರು.
ಗೂಂಡಾಗಳ ಹಾವಳಿಯಿಂದ ಜನಸಾಮಾನ್ಯರು ಸೇರಿದಂತೆ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಕೇರಳದಲ್ಲಿ ಹಿಂಸಾತ್ಮಕ ರಾಜಕಾರಣ ಹೆಚ್ಚುತ್ತಿದೆ. ಮಕ್ಕಳು ಮತ್ತು ಮಹಿಳೆಯರು ಸುರಕ್ಷಿತವಾಗಿಲ್ಲ. ದಿನದಿಂದ ದಿನಕ್ಕೆ ಹಲವಾರು ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಸಮಸ್ಯೆ ಬಗೆಹರಿಸಲು ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ತುರ್ತು ನಿರ್ಣಯಕ್ಕೆ ನೋಟಿಸ್ ನೀಡಿವೆ.