ಮುಂಬೈ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭಾರತೀಯ ಜನತಾ ಪಕ್ಷದ ಪದಾಧಿಕಾರಿಯೊಬ್ಬರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ. 2 ರಂದು ಖುದ್ದು ಹಾಜರಾಗುವಂತೆ ಮುಂಬೈ ನ್ಯಾಯಾಲಯ ಬುಧವಾರ ಆದೇಶಿಸಿದೆ.
ಬಿಜೆಪಿ ಮುಂಬೈ ಕಾರ್ಯದರ್ಶಿ ಅಡ್ವೊಕೇಟ್ ವಿವೇಕಾನಂದ ಗುಪ್ತಾ ಅವರು ಮಜಗಾಂವ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪದ ಮೇಲೆ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದಾರೆ.
'ಡಿಸೆಂಬರ್ 21, 2021 ರಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಬ್ಯಾನರ್ಜಿ ಅವರು ರಾಷ್ಟ್ರಗೀತೆಯ ಮೊದಲ ಎರಡು ಸಾಲುಗಳನ್ನು ಕುಳಿತು ಹಾಡಿ ನಂತರ ಎದ್ದುನಿಂತು ಉಳಿದವುಗಳನ್ನು ಹಾಡಿದ್ದರು. ಹೀಗಾಗಿ ಅವರು ರಾಷ್ಟ್ರೀಯ ಗೌರವಗಳಿಗೆ ಅವಮಾನ ತಡೆ ಕಾಯಿದೆ, 1971, ಸೆಕ್ಷನ್ 3 ಮತ್ತು ಗೃಹ ಸಚಿವಾಲಯದ 2015 ರ ಆದೇಶಗಳ ಅಡಿಯಲ್ಲಿ ಅಪರಾಧ ಎಸಗಿದ್ದಾರೆ' ಎಂದು ಗುಪ್ತಾ ಐಎಎನ್‌ಎಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅವರ ದೂರಿನ ಮೇರೆಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಿ.ಐ. ಮೊಕಾಶಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಾರ್ಚ್ 2 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಿದ್ದಾರೆ.
ಮುಂಬೈನ ವೈಬಿ ಚವಾಣ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದ್ದು, ಬ್ಯಾನರ್ಜಿ ಮೊದಲಿಗೆ ಕುಳಿತು ರಾಷ್ಟ್ರಗೀತೆ ಹಾಡಿದ್ದಾರೆ, ಬಳಿಕ ಉಳಿದ ಪದ್ಯಗಳನ್ನು ಹಾಡಲು ಎದ್ದು ನಿಂತು ಹಾಡಿದ್ದಾರೆ. ಈ ಬಗ್ಗೆ ಕಫ್ ಪರೇಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದಾಗಿ ಗುಪ್ತಾ ತಿಳಿಸಿದ್ದಾರೆ.
'ದೂರು, ದೂರುದಾರರ ಹೇಳಿಕೆಯ ಪರಿಶೀಲನೆ, ಡಿವಿಡಿಯಲ್ಲಿನ ವಿಡಿಯೊ ಕ್ಲಿಪ್ ಮತ್ತು ಯೂಟ್ಯೂಬ್ ಲಿಂಕ್‌ಗಳಲ್ಲಿನ ವಿಡಿಯೊ ಕ್ಲಿಪ್‌ಗಳಿಂದ ಆರೋಪಿ (ಮಮತಾ ಬ್ಯಾನರ್ಜಿ) ಕುಳಿತು ರಾಷ್ಟ್ರಗೀತೆಯನ್ನು ಹಾಡಿ ಬಳಿಕ ಎದ್ದುನಿಂತು ಹಾಡಿದ್ದಾರೆ. 1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಆರೋಪಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ' ಎಂದು ಮ್ಯಾಜಿಸ್ಟ್ರೇಟ್ ಮೊಕಾಶಿ ಆದೇಶವನ್ನು ಹೊರಡಿಸಿದ್ದಾರೆ.