ನವದೆಹಲಿ: ಭಾರತೀಯರನ್ನು ಸ್ವದೇಶಕ್ಕೆ ಕರೆತರಲೆಂದು ಉಕ್ರೇನ್‌ಗೆ ಹಾರಿದ್ದ ಏರ್ ಇಂಡಿಯಾ ವಿಮಾನವು, ಅಲ್ಲಿಗೆ ತೆರಳಲಾಗದೇ ಹಿಂದಿರುಗಿದೆ. ಪ್ರತ್ಯೇಕತಾವಾದಿಗಳ ವಶದಲ್ಲಿರುವ ಎರಡು ಪ್ರದೇಶಗಳಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿರುವ ಹಿನ್ನೆಲೆಯಲ್ಲಿ ತನ್ನ ವಾಯುಪ್ರದೇಶದಲ್ಲಿ ವಿಮಾನ ಹಾರಾಟ ನಿರ್ಬಂಧಿಸಿರುವುದಾಗಿ ಉಕ್ರೇನ್ ಘೋಷಿಸಿದೆ.
ಹಲವು ದಿಕ್ಕುಗಳಿಂದ ಉಕ್ರೇನ್ ಗಡಿ ದಾಟಿ ಒಳನುಗ್ಗಿದ ರಷ್ಯಾ ಭೂ ಸೇನೆ
ಸಾವಿರಾರರು ಭಾರತೀಯರು ಉಕ್ರೇನ್‌ನಲ್ಲಿ ಸಿಲುಕಿದ್ದು, ಸ್ವದೇಶಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.
ಉಕ್ರೇನ್‌ನಲ್ಲಿರುವ ರಷ್ಯಾ ಬೆಂಬಲಿತ ಎರಡು ಬಂಡುಕೋರ ಪ್ರದೇಶಗಳಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸುವ ತೀರ್ಮಾನವನ್ನು ರಷ್ಯಾದ ಆಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಘೋಷಿಸಿದರು. ಬಂಡುಕೋರರ ಹಿಡಿತದಲ್ಲಿರುವ ಈ ಪ್ರದೇಶಗಳನ್ನು ಪುಟಿನ್ ಸೋಮವಾರ ಸ್ವತಂತ್ರ ಎಂದು ಘೋಷಿಸಿದ್ದರು.
'ಉಕ್ರೇನ್‌ಗೆ ಹೋಗುವ ಎಲ್ಲಾ ವಿಮಾನಗಳಿಗೆ ಸೂಚನೆ ರವಾನಿಸಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನವು ದೆಹಲಿಗೆ ಹಿಂತಿರುಗಲು ನಿರ್ಧರಿಸಿತು. ನಾಗರಿಕರ ಸ್ಥಳಾಂತರಕ್ಕಾಗಿ ಪರ್ಯಾಯ ಮಾರ್ಗಗಳನ್ನು ಬಳಸಲಾಗುತ್ತಿದೆ' ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ಪೂರ್ವ ಉಕ್ರೇನ್‌ನಲ್ಲಿ ದೊಡ್ಡ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಗಳು ಆರಂಭವಾಗಿರುವುದರಿಂದ, ವಾಯುಪ್ರದೇಶದಲ್ಲಿ ಮಿಲಿಟರಿ ವಿಮಾನಗಳ ಚಟುವಟಿಕೆ ಹೆಚ್ಚಿರುತ್ತದೆ. ಇಂಥ ಸನ್ನಿವೇಶದಲ್ಲಿ ವಾಣಿಜ್ಯ ವಿಮಾನಗಳು ತೊಂದರೆಗೆ ತುತ್ತಾಗುವ ಸಾಧ್ಯತೆಗಳಿರುವುದರಿಂದ ವಿಮಾನಯಾನವನ್ನು ನಿರ್ಬಂಧಿಸಲಾಗಿದೆ.
2014ರ ಜುಲೈನಲ್ಲಿ ಮಲೇಷ್ಯಾ ಏರ್‌ಲೈನ್ಸ್ ವಿಮಾನವನ್ನು ಉಕ್ರೇನ್‌ನ ಬಂಡುಕೋರ ಪಡೆಗಳು ಹೊಡೆದುರುಳಿಸಿದ್ದವು. ವಿಮಾನದಲ್ಲಿದ್ದ 298 ಜನರು ಸಾವನ್ನಪ್ಪಿದರು. ಪೂರ್ವ ಉಕ್ರೇನ್‌ನಿಂದ ಉಡಾವಣೆಯಾದ ರಷ್ಯಾ ನಿರ್ಮಿತ 'ಬಿಯುಕೆ ಯುದ್ಧ ವಿಮಾನ ನಿರೋಧಕ ಕ್ಷಿಪಣಿ'ಯಿಂದ ಮಲೇಷ್ಯಾ ವಿಮಾನವನ್ನು ಹೊಡೆದುರುಳಿಸಲಾಗಿತ್ತು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.