ಮುಂಬೈ: ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮಾರ್ಚ್ 2ರೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಮುಂಬೈನ ಮಜಗಾಂವ್ ಮ್ಯಾಜಿಸ್ಟ್ರೇಟ್ ಕೋರ್ಟ್ ಬುಧವಾರ ಸಮನ್ಸ್ ಜಾರಿ ಮಾಡಿದೆ.
ಬಿಜೆಪಿ ಕಾರ್ಯಕಾರಿ, ವಕೀಲ ವಿವೇಕಾನಂದ ಗುಪ್ತಾ ಅವರು ರಾಷ್ಟ್ರೀಯ ಘನತೆಗೆ ಅವಮಾನ ತಡೆ ಕಾಯಿದೆ 1971ರ ಸೆಕ್ಷನ್ 3 ರ ಅಡಿಯಲ್ಲಿ ಪಶ್ಚಿಮ ಬಂಗಾಳ ಸಿಎಂ ವಿರುದ್ಧ ದೂರು ದಾಖಲಿಸಿ, ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಿದ್ದರು.
ಕಳೆದ ವರ್ಷ ಲೇಖಕ-ಕವಿ ಜಾವೇದ್ ಅಖ್ತರ್ ಅವರು ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಭಾಷಣಕಾರರಾಗಿದ್ದ ಮಮತಾ ಬ್ಯಾನರ್ಜಿ ರಾಷ್ಟ್ರಗೀತೆ ಆರಂಭವಾದಾಗ ಎದ್ದು ನಿಲ್ಲದೇ ಕುಳಿತುಕೊಂಡಿದ್ದರು. ನಂತರ ಎದ್ದುನಿಂತು ಎರಡು ಸಾಲುಗಳನ್ನು ಹಾಡಿ ಥಟ್ಟನೆ ನಿಲ್ಲಿಸಿದರು. ಬ್ಯಾನರ್ಜಿ ಅವರ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಗುಪ್ತಾ ದೂರಿನಲ್ಲಿ ತಿಳಿಸಿದ್ದಾರೆ.
ಗುಪ್ತಾ ಅವರು ನ್ಯಾಯಾಲಯಕ್ಕೆ ನೀಡಿದ ದೂರಿನಲ್ಲಿ ಬ್ಯಾನರ್ಜಿ “ರಾಷ್ಟ್ರಗೀತೆಗೆ ಸಂಪೂರ್ಣ ಅಗೌರವ” ತೋರಿದರು ಮತ್ತು ಅವರು ಗೀತೆಯನ್ನು ನಿಲ್ಲಿಸಿದ ನಂತರ ತಕ್ಷಣವೇ ಸ್ಥಳದಿಂದ ನಿರ್ಗಮಿಸಿದರು ಎಂದು ಹೇಳಿದ್ದಾರೆ.