ಹೈದರಾಬಾದ್: ಸೆಪ್ಟೆಂಬರ್ 29, 2016ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರ(P0K)ಭಾಗದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ ಎಂಬ ಭಾರತೀಯ ಸೇನೆಯ ಪ್ರತಿಪಾದನೆಗೆ ಕೇಂದ್ರ ಸರ್ಕಾರದಲ್ಲಿ ಸಾಕ್ಷಿ ಏನಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಕೇಳುವ ಮೂಲಕ ಸುದ್ದಿಯಾಗಿದ್ದಾರೆ.
2016ರ ಸೆಪ್ಟೆಂಬರ್ ನಿಂದ ಇಂದಿನವರೆಗೂ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದಕ್ಕೆ ನಾನು ಸಾಕ್ಷಿ ಕೇಳುತ್ತಿದ್ದೇನೆ. ಕೇಂದ್ರ ಸರ್ಕಾರ ಸಾಕ್ಷಿ ತೋರಿಸಲಿ, ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ, ಹೀಗಾಗಿ ಜನರು ಸಾಕ್ಷಿ ಕೇಳುತ್ತಿದ್ದಾರೆ ಎಂದರು.
ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಭಾರತೀಯ ಸೇನೆ ಯೋಧರು ಗಡಿಯಲ್ಲಿ ಹೋರಾಡುತ್ತಿದ್ದಾರೆ. ಶತ್ರುಗಳಿಂದ ಯುದ್ಧದಲ್ಲಿ ಹೋರಾಡಿ ವೀರಮರಣವನ್ನು ಕಂಡರೆ ಅದರ ಕೀರ್ತಿ ಭಾರತೀಯ ಸೇನೆಗೆ ಹೋಗಬೇಕೆ ಹೊರತು ಕೇಂದ್ರದ ಬಿಜೆಪಿ ಸರ್ಕಾರಕ್ಕಲ್ಲ ಎಂದಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಈ ಪ್ರಶ್ನೆ ಕೇಳಿದ್ದಾರೆ.
ಕಳೆದ ಶುಕ್ರವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಜನರ ಮನೋಸ್ಥಿತಿ ನೋಡಿ, ಜನರಲ್ ಬಿಪಿನ್ ರಾವತ್ ಅವರು ನಮ್ಮ ದೇಶದ ಹೆಮ್ಮೆ. ಅವರ ನಾಯಕತ್ವದಲ್ಲಿ ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ಆಯಿತು. ಅದಕ್ಕೆ ರಾಹುಲ್ ಗಾಂಧಿ ಸಾಕ್ಷಿ ಕೇಳುತ್ತಿದ್ದಾರೆ. ನೀವು ರಾಜೀವ್ ಗಾಂಧಿಯವರ ಮಗ ಹೌದೋ, ಅಲ್ಲವೋ ಎಂದು ನಾವು ಯಾವತ್ತಾದರೂ ನಿಮ್ಮಲ್ಲಿ ಸಾಕ್ಷಿ ಕೇಳಿದ್ದೇವೆಯೇ, ನಮ್ಮ ಸೇನೆಯಿಂದ ಸಾಕ್ಷಿ ಕೇಳಲು ನಿಮಗೆ ಯಾವ ಅಧಿಕಾರವಿದೆ ಎಂದು ಕೇಳಿದ್ದರು.
ಅಸ್ಸಾಂ ಮುಖ್ಯಮಂತ್ರಿಯವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ರಾಹುಲ್ ಗಾಂಧಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಸ್ಸಾಂ ಮುಖ್ಯಮಂತ್ರಿಯನ್ನು ಹುದ್ದೆಯಿಂದ ವಜಾಗೊಳಿಸಿ ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡ ಅವರನ್ನು ಒತ್ತಾಯಿಸಿದ್ದಾರೆ.
ಚಂದ್ರಶೇಖರ್ ರಾವ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ, ಇದು ಚಂದ್ರಶೇಖರ್ ರಾವ್ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆಯೇ, ಇಲ್ಲವೇ ಎಂದು ಪ್ರಶ್ನೆ ಮಾಡುವುದು ದೊಡ್ಡ ಅಪರಾಧ. ಚಂದ್ರಶೇಖರ್ ರಾವ್ ಅವರು ನಾನು ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡಿರುವುದು ಅವರಿಗೆ ಸಿಟ್ಟು ತರಿಸಿರಬೇಕೆ ಹೊರತು ರಾಹುಲ್ ಗಾಂಧಿಯವರು ಭಾರತೀಯ ಸೇನೆಯ ಬಗ್ಗೆ ಮಾತನಾಡಿರುವುದು ಅವರಿಗೆ ಸಿಟ್ಟು ತರಿಸಿಲ್ಲ ಎನಿಸುತ್ತದೆ ಎಂದಿದ್ದಾರೆ.
ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಸೆಪ್ಟೆಂಬರ್ 29, 2016ರಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಜಮ್ಮು-ಕಾಶ್ಮೀರದ ಉರಿಯ ಮೂಲ ಶಿಬಿರದಲ್ಲಿ 19 ಮಂದಿ ಭಾರತೀಯ ಯೋಧರು ಪಾಕ್ ಬೆಂಬಲಿತ ಉಗ್ರರಿಂದ ಹುತಾತ್ಮರಾಗಿದ್ದಕ್ಕೆ ಪ್ರತೀಕಾರವಾಗಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.