ಕಾಸರಗೋಡು: ಯುವಕರು ಸಮಗ್ರ ತರಬೇತಿ ಪಡೆದರೆ ವಿಪತ್ತು ವಲಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತದೆ ಮತ್ತು ಯುವಕರು ದೇಶದ ಬೆನ್ನೆಲುಬು ಎಂಬ ಮಾತಿಗೆ ಅರ್ಥ ಪ್ರಾಪ್ತಿಯಾಗುತ್ತದೆ ಎಂದು ರಾಜ್ಯ ಪುರಾತತ್ವ, ಕರಾವಳಿ, ಮ್ಯೂಸಿಯಂ ಇಲಾಖೆಗಳ ಸಚಿವ ಅಹಮದ್ ದೇವರ್ಕೋವಿಲ್ ಹೇಳಿದರು.
ಕೇರಳ ವಲಿಯಂಟರಿ ಯೂತ್ ಆಕ್ಷನ್ ಪೋರ್ಸ್ ಕ್ರಿಯಾ ಪಡೆ ಮುಖಂಡರ ತರಬೇತಿಯನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು.
ಪ್ರವಾಹ, ಕೋವಿಡ್, ನಿಪಾ ಸೋಂಕು ಸಂದರ್ಭಗಳಲ್ಲಿ ಯುವಕರ ಕಾರ್ಯೋನ್ಮುಖತೆಯತನ್ನು ಸಮಾಜವು ಗುರುತಿಸಿದೆ. ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು ಎಂಬುದನ್ನು ರಾಜ್ಯದ ಯುವಕರು ವಿವಿಧ ಚಟುವಟಿಕೆಗಳ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಸಚಿವರು ಹೇಳಿದರು.
ಕೇರಳ ಓಲಿಯಂಟರಿ ಯೂತ್ ಆಕ್ಷನ್ ಪೋರ್ಸ್ ವಿಪತ್ತು ಪರಿಹಾರ ಮತ್ತು ಇತರ ಸಂಕಷ್ಟದ ಪ್ರದೇಶಗಳಲ್ಲಿ ಯುವ ಸಬಲೀಕರಣವನ್ನು ಖಚಿತಪಡಿಸಿಕೊಳ್ಳಲು ಕೇರಳ ರಾಜ್ಯ ಯುವ ಕಲ್ಯಾಣ ಮಂಡಳಿಯ ಅಡಿಯಲ್ಲಿ ರಚಿಸಲಾದ ಜಿಲ್ಲಾ ಮಟ್ಟದ ಸ್ವಯಂಸೇವಕ ಪಡೆಯಾಗಿದೆ. ಪಂಚಾಯತ್/ಮುನ್ಸಿಪಲ್ ಮಟ್ಟದಲ್ಲಿ ಅವರ ಚಟುವಟಿಕೆಗಳನ್ನು ಖಚಿತಪಡಿಸಿಕೊಳ್ಳಲು ರಚಿಸಲಾದ ಸ್ವಯಂಸೇವಕ ದಳದ ಕ್ಯಾಪ್ಟನ್‍ಗಳಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಇದರ ಅಂಗವಾಗಿ ಬೇಕಲದಲ್ಲಿ ಎರಡು ದಿನಗಳ ತರಬೇತಿ ಶಿಬಿರ ಆಯೋಜಿಸಲಾಗಿದೆ. ಸ್ವಯಂಸೇವಕರು ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಿಂದ ಎರಡು ದಿನಗಳ ತರಬೇತಿ ಪಡೆಯುತ್ತಿದ್ದಾರೆ. 38 ಪಂಚಾಯಿತಿ ಮತ್ತು ಮೂರು ನಗರಸಭೆಗಳ 41 ಕ್ಯಾಪ್ಟನ್‍ಗಳಿಗೆ ತರಬೇತಿ ನೀಡಲಾಗುತ್ತಿದೆ.
ಶಾಸಕ ಸಿ.ಎಚ್.ಕುಂಜಂಬು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಯುವ ಕಲ್ಯಾಣ ಮಂಡಳಿ ಸದಸ್ಯ ದೀಪು ಪ್ರೇಮನಾಥ್ ಯೋಜನೆ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಮತ್ತು ಕೇರಳ ಸ್ವಯಂಸೇವಾ ಯುವಜನ ಕ್ರಿಯಾ ಪಡೆ ರಾಜ್ಯ ಸಂಯೋಜಕ ಪಿ.ಎಂ.ಸಾಜನ್ ಮಾತನಾಡಿದರು. ಜಿಲ್ಲಾ ಯುವ ಸಮನ್ವಯಾಧಿಕಾರಿ ಎ.ವಿ.ಶಿವಪ್ರಸಾದ್ ಸ್ವಾಗತಿಸಿ, ಜಿಲ್ಲಾ ಯುವ ಕಾರ್ಯಕ್ರಮ ಅಧಿಕಾರಿ ಪಿ.ಸಿ.ಶಿಲಾಸ್ ವಂದಿಸಿದರು.