ನವದೆಹಲಿ: ಅಪ್ನಾ ದಳ(ಎಸ್) ಸಾಮಾಜಿಕ ನ್ಯಾಯದ ಪರವಾಗಿ ನಿಂತಿದೆ ಎಂದು ಒತ್ತಿ ಹೇಳಿದ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರು, ತಮ್ಮ ಪಕ್ಷ "ಹಿಂದುತ್ವ ಮತ್ತು ಆ ಎಲ್ಲಾ ವಿಚಾರಗಳಿಂದ" ಬೇರ್ಪಟ್ಟಿದೆ. ನಮ್ಮ ಪಕ್ಷ ಬಿಜೆಪಿಗಿಂತ ಸೈದ್ಧಾಂತಿಕವಾಗಿ ಭಿನ್ನವಾಗಿದೆ ಎಂದು ಸೋಮವಾರ ಹೇಳಿದ್ದಾರೆ.
ಮುಸ್ಲಿಂ ಅಭ್ಯರ್ಥಿಗಳು ತಮ್ಮ ಪಕ್ಷಕ್ಕೆ ಅಸ್ಪೃಶ್ಯರಲ್ಲ ಎಂದು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಪ್ರಮುಖ ಮಿತ್ರ ಅಪ್ನಾ ದಳ (ಎಸ್) ಮುಖ್ಯಸ್ಥರು ಹೇಳಿದ್ದಾರೆ. ಏಳು ಹಂತದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಫೆಬ್ರವರಿ 10 ರಂದು ಮೊದಲ ಹಂತದ ಮತದಾನ ನಡೆಯಲಿದೆ.
"ಹೌದು ನಾವು ಬಿಜೆಪಿಗಿಂತ ಸೈದ್ಧಾಂತಿಕವಾಗಿ ಭಿನ್ನರು. ಜನರು ನನಗೆ ಹಿಂದುತ್ವ ಮತ್ತು ಆ ಎಲ್ಲಾ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸುತ್ತಿದ್ದಾರೆ. ನಾನು ಆ ಎಲ್ಲಾ ಸಮಸ್ಯೆಗಳಿಂದ ದೂರವಿರುತ್ತೇನೆ ಮತ್ತು ನಮ್ಮ ಪಕ್ಷವು ಧಾರ್ಮಿಕ ರಾಜಕೀಯ ಮಾಡುವುದಿಲ್ಲ. ನಾವು ಸಾಮಾಜಿಕ ನ್ಯಾಯಕ್ಕಾಗಿ ನಿಲ್ಲುತ್ತೇವೆ. ಅದು ನಮ್ಮ ಸಿದ್ಧಾಂತವಾಗಿದೆ" ಎಂದು ಪಟೇಲ್ ಅವರು ಪಿಟಿಐಗೆ ತಿಳಿಸಿದ್ದಾರೆ.
"ನಾವು ಯಾವಾಗಲೂ ಬೀದಿಗಳಲ್ಲಿ ಅಥವಾ ಸಂಸತ್ತಿನಲ್ಲಿ ಸಮಾಜದ ಅಂಚಿನಲ್ಲಿರುವ ವರ್ಗಗಳಿಗಾಗಿ ಕೆಲಸ ಮಾಡಿದ್ದೇವೆ. ಮತ್ತು ಇದು ನಮ್ಮ ತತ್ವಶಾಸ್ತ್ರ ಮತ್ತು ನಮ್ಮ ಸ್ಥಾಪನೆಯ ತತ್ವಗಳು. ನಾವು ಅದಕ್ಕೆ ಅಂಟಿಕೊಳ್ಳುತ್ತೇವೆ" ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಳೆದ ಮೂರು ಚುನಾವಣೆಗಳು, 2014 ಮತ್ತು 2019ರ ಸಾರ್ವತ್ರಿಕ ಚುನಾವಣೆಗಳು ಮತ್ತು 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ ಅಪ್ನಾ ದಳ ಈ ಬಾರಿ ತನ್ನ ಮೊದಲ ಮುಸ್ಲಿಂ ಅಭ್ಯರ್ಥಿಯನ್ನು ಘೋಷಿಸಿದೆ.
ಕಾಂಗ್ರೆಸ್ ಹಿರಿಯ ನಾಯಕಿ ಬೇಗಂ ನೂರ್ ಬಾನೊ ಅವರ ಮೊಮ್ಮಗ ಹೈದರ್ ಅಲಿ ಅವರು ಅಪ್ನಾ ದಳ(ಎಸ್) ಘೋಷಿಸಿದ ಮೊದಲ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ.