ಬಲ್ಲಿಯಾ: ಬಲ್ಲಿಯಾ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರಿದ್ದ ಹೆಲಿಕಾಪ್ಟರ್ ಇಂಟರ್ ಮೀಡಿಯೇಟ್ ಕಾಲೇಜು ಮೈದಾನದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಾಗ ರಭಸವಾಗಿ ಬೀಸಿದ ಗಾಳಿಗೆ ಕಾಲೇಜಿನ ಗೋಡೆ ಕುಸಿದು ಬಿದ್ದಿದೆ.
ಆದರೆ, ಅವಘಡದಿಂದ ಯಾವುದೇ ಸಾವು-ನೋವಾಗಿರುವ ಕುರಿತು ವರದಿಯಾಗಿಲ್ಲ.
ಈ ಘಟನೆಯಿಂದ ಬಿಜೆಪಿ ಮುಜುಗರಕ್ಕೀಡಾಗಿದ್ದು, ನಡ್ಡಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೋಡೆ ಕುಸಿದು ಬಿದ್ದಿರುವುದು ಮೀಮ್ ಗಳನ್ನು ಪ್ರೇರೇಪಿಸಿತು. ಪ್ರತಿಪಕ್ಷಗಳು ಇದನ್ನು ಟೀಕಾಸ್ತ್ರವನ್ನು ಬಳಸಿಕೊಂಡಿವೆ.
ಹೆಲಿಕಾಪ್ಟರ್ ಲ್ಯಾಂಡಿಂಗ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಾಜ್ಯದಲ್ಲಿನ ಶೈಕ್ಷಣಿಕ ಮೂಲಸೌಕರ್ಯಗಳ ಗುಣಮಟ್ಟವನ್ನು ಹಲವರು ಪ್ರಶ್ನಿಸಿದ್ದಾರೆ. ಮತದಾರರನ್ನು ಒಲಿಸಿಕೊಳ್ಳಲು ಬಿಜೆಪಿ ತನ್ನ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸುತ್ತಿದೆ. ಆದರೆ ಹೆಲಿಕಾಪ್ಟರ್ ಲ್ಯಾಂಡಿಂಗ್‌ನಿಂದಾಗಿ ಕಾಲೇಜು ಗೋಡೆ ಕುಸಿದಿರುವುದು ಬಿಜೆಪಿ ವಾದದ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜಿಲ್ಲೆಯ ಫೆಫ್ನಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ರಾಜ್ಯ ಸಚಿವ ಉಪೇಂದ್ರ ತಿವಾರಿ ಪರ ಪ್ರಚಾರ ನಡೆಸಲು ಬಿಜೆಪಿ ಅಧ್ಯಕ್ಷರು ಆಗಮಿಸಿದ್ದರು. ರಾಟ್ಸರ್ ಇಂಟರ್ ಕಾಲೇಜ್ ಮೈದಾನದಲ್ಲಿ ನಡ್ಡಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಗಾಗಿ ಹೆಲಿಪ್ಯಾಡ್ ಅನ್ನು ನಿರ್ಮಿಸಲಾಗಿತ್ತು.