ನವದೆಹಲಿ: ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾಗೆ ಒತ್ತುಕೊಡುತ್ತಿದ್ದು, ಈ ಸಲದ ಬಜೆಟ್ನಲ್ಲಿ ಡಿಜಿಟಲ್ಗೆ ಭಾರಿ ಆದ್ಯತೆಯನ್ನೇ ನೀಡಿದೆ. ಮಾತ್ರವಲ್ಲ ಸರ್ಕಾರದ್ದೇ ಆದ ಡಿಜಿಟಲ್ ರುಪೀಯನ್ನು ಚಲಾವಣೆಗೆ ತರುವುದಾಗಿಯೂ ಹೇಳಿದೆ.
ಆದರೆ ಈ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಕ್ರಿಪ್ಟೊಕರೆನ್ಸಿ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡುವವರಿಗೂ ಅವರು ಕಿವಿಮಾತು ಹೇಳಿದ್ದಾರೆ. ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡುವವರಿಗೆ ಆರ್ಬಿಐ ಯಾವಾಗಲೂ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದೆ ಎಂಬುದನ್ನು ಅವರು ಹೇಳಿದ್ದಾರೆ.
ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡುವವರು ಅದನ್ನು ತಮ್ಮ ವೈಯಕ್ತಿಕ ರಿಸ್ಕ್ನಿಂದ ಮಾಡುತ್ತಿದ್ದೇವೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು ಎಂಬುದನ್ನು ನಾನು ಈ ಹಿಂದೆಯೂ ಹೇಳಿದ್ದೇನೆ ಎಂಬುದಾಗಿ ಅವರು ತಿಳಿಸಿದ್ದಾರೆ.
ಸರ್ಕಾರ ತರಲಿರುವ ಡಿಜಿಟಲ್ ರುಪೀ ಕುರಿತು ಕೂಡ ಅವರು ಇದೇ ಸಂದರ್ಭಲ್ಲಿ ಪ್ರಸ್ತಾಪಿಸಿದ್ದು, 2022-23ನೇ ಸಾಲಿನಲ್ಲಿ ಡಿಜಿಟಲ್ ರುಪೀಯನ್ನು ಆರ್ಬಿಐ ಚಲಾವಣೆಗೆ ತರಲಿದೆ ಎಂದು ಹೇಳಿದ್ದಾರೆ. ಯಾವಾಗ ಎಂದು ಸದ್ಯಕ್ಕೆ ಹೇಳಲಾಗದಿದ್ದರೂ ಇದೇ ಆರ್ಥಿಕ ವರ್ಷದಲ್ಲಿ ಡಿಜಿಟಲ್ ರುಪೀ ಜಾರಿಗೆ ಬರಲಿದೆ ಎಂದಿದ್ದಾರೆ. ಅಲ್ಲದೆ ಡಿಜಿಟಲ್ ರುಪೀಗೂ ಎಂದಿನ ಸಾಮಾನ್ಯ ರೂಪಾಯಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
ಆರ್ಬಿಐ ಡೆಪ್ಯುಟಿ ಗವರ್ನರ್ ಟಿ.ರವಿಶಂಕರ್ ಅವರು ಡಿಜಿಟಲ್ ರುಪೀ ಕುರಿತು ಮತ್ತಷ್ಟು ವಿವರವಾಗಿ ತಿಳಿಸಿದ್ದಾರೆ. ಸದ್ಯ ಚಲಾವಣೆಯಲ್ಲಿರುವ ಮುದ್ರಿತ ನೋಟಿನ ರೂಪಾಯಿಗೂ ಡಿಜಿಟಲ್ ರೂಪಾಯಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಎರಡನ್ನೂ ಒಂದರಿಂದ ಇನ್ನೊಂದಕ್ಕೆ ಪರಿವರ್ತಿಸಿಕೊಳ್ಳಬಹುದು. ಆದರೆ ಡಿಜಿಟಲ್ ರುಪೀ ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಇರುತ್ತದೆ ಎಂದು ಹೇಳಿದ್ದಾರೆ.
ಸಾಮಾನ್ಯ ರೂಪಾಯಿ ಹಾಗೂ ಡಿಜಿಟಲ್ ರುಪೀ ಎರಡೂ ಒಂದೇ. ಮುದ್ರಿತ ನೋಟುಗಳನ್ನು ನೀವು ಪರ್ಸ್ನಲ್ಲಿ ಅಥವಾ ಕಿಸೆಯಲ್ಲಿ ಇಟ್ಟುಕೊಂಡಿರುತ್ತೀರಿ, ಹಾಗೇ ಡಿಜಿಟಲ್ ರುಪೀಯನ್ನು ಮೊಬೈಲ್ಫೋನ್ನಂಥ ಉಪಕರಣದಲ್ಲಿ ಇಟ್ಟುಕೊಂಡಿರುತ್ತೀರಿ. ಇನ್ನು ಮಾಮೂಲಿ ನೋಟು/ರೂಪಾಯಿಯಂತೆ ಡಿಜಿಟಲ್ ರುಪೀ ಆರ್ಬಿಐ ಮಾನ್ಯತೆ/ಹೊಣೆಗಾರಿಕೆ ಹೊಂದಿರುತ್ತದೆ. ಆದರೆ ಕ್ರಿಪ್ಟೊಕರೆನ್ಸಿ ಖಾಸಗಿಯಾಗಿ ಸೃಷ್ಟಿಸಿದ ಹಣವಾಗಿರುತ್ತದೆ ಎಂದು ರವಿಶಂಕರ್ ಪರೋಕ್ಷವಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.