ಚಂಡೀಗಢ: ಪಂಜಾಬ್ ನಲ್ಲಿ ಇಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ಮಧ್ಯೆ, ಶಿರೋಮಣಿ ಅಕಾಲಿದಳ(ಎಸ್‌ಎಡಿ) ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅತಿದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ.
ಪಂಜಾಬ್ ಚುನಾವಣೆ ಬಳಿಕ ಬಿಜೆಪಿಯೊಂದಿಗೆ ಶಿರೋಮಣಿ ಅಕಾಲಿದಳ ಮತ್ತೆ ಮೈತ್ರಿ ಮಾಡಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದ ಅಕಾಲಿದ, ಕೃಷಿ ಬಿಲ್ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಮಧ್ಯೆ ಒಡಕು ಉಂಟಾಗಿತ್ತು.
ಈ ಬಗ್ಗೆ ಮಾತನಾಡಿದ ಬಿಕ್ರಮ್ ಮಜಿಥಿಯಾ, 'ನನ್ನ ಹೋರಾಟ ಪಂಜಾಬ್ ಜನರಿಗಾಗಿ. ಅಮೃತಸರ ಪೂರ್ವ ಭಾಗದ ಅಭಿವೃದ್ಧಿಯ ಅಗತ್ಯವಿದೆ. ಇದು ಅತ್ಯಂತ ಹಿಂದುಳಿದಿದ್ದು, ಬಡವರಿಗೆ ಕಲ್ಯಾಣ ಯೋಜನೆಗಳು ಸಿಗುತ್ತಿಲ್ಲ. ಈ ಚುನಾವಣೆಯಲ್ಲಿ ಸತ್ಯ ಗೆಲ್ಲುತ್ತದೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಜಿಥಿಯಾ, 'ಅಹಂಕಾರವನ್ನು ಸೋಲಿಸಲಾಗುವುದು, ಜನರು ಐದು ವರ್ಷಗಳಿಂದ ಕಾಂಗ್ರೆಸ್ ಅನ್ನು ನೋಡಿದ್ದಾರೆ, ಆದರೆ ಆ ಸರ್ಕಾರ ಬಡವರಿಗೆ ಏನನ್ನೂ ಮಾಡಿಲ್ಲ' ಎಂದು ಹೇಳಿದರು.
ಪಕ್ಷಕ್ಕೆ ಒಂದು ವೇಳೆ ಕಡಿಮೆ ಸಂಖ್ಯೆ ಬಂದರೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂದು ಹೇಳಿರುವ ಅವರು, ನಮಗೆ ಗೆಲುವಿನ ವಿಶ್ವಾಸವಿದೆ. ಪಂಜಾಬ್‌ನಲ್ಲಿ ಅಕಾಲಿದಳ-ಬಿಎಸ್‌ಪಿ ಮುಂದಿನ ಸರ್ಕಾರ ರಚನೆ ಮಾಡಲಿದೆ. ಸಂಖ್ಯೆ ಕಡಿಮೆಯಾದರೆ ಬಿಜೆಪಿ ಬೆಂಬಲ ಪಡೆಯಲು ಪಕ್ಷ ನಿರ್ಧರಿಸಲಿದೆ. ಅದು ಸಂಖ್ಯಾಬಲದ ಮೇಲೆ ಅವಲಂಬಿತವಾಗಿದೆ. ಆದರೆ ಕಾಂಗ್ರೆಸ್ ನಮ್ಮ ನಂಬರ್-1 ರಾಜಕೀಯ ಶತ್ರು ಎಂದು ಹೇಳಿದ್ದಾರೆ.
ಈ ಬಾರಿ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಮಜಿತಾ ಮತ್ತು ಅಮೃತಸರ ಪೂರ್ವದಿಂದ ಸ್ಪರ್ಧಿಸುತ್ತಿದ್ದಾರೆ. ಅಮೃತಸರ ಪೂರ್ವ ಕ್ಷೇತ್ರದಿಂದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ಅವರು ಕಣಕ್ಕಿಳಿದಿದ್ದಾರೆ. ಈಗಾಗಲೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಎಸ್‌ಎಡಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡಿವೆ. ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳ ಪೈಕಿ 20ರಲ್ಲಿ ಬಿಎಸ್‌ಪಿ ಸ್ಪರ್ಧಿಸುತ್ತಿದೆ.