ನವದೆಹಲಿ: ಒಂದು ದೇಶ ಒಂದು ತೆರಿಗೆ ಪರಿಕಲ್ಪನೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಲ್ಲಿ ರಚನಾತ್ಮಕ ಬದಲಾವಣೆ ತರುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬದಲಾವಣೆ ಏಕಕಂತಿನಲ್ಲಿ ನಡೆಯದು. ಬದಲಾಗಿ ಹಂತ ಹಂತವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಈ ವಿದ್ಯಮಾನದ ಬಗ್ಗೆ ಅರಿವು ಇರುವ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಎಸ್ಟಿ ಜಾರಿಗೊಳಿಸಿ ನಾಲ್ಕು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಎಸ್ಟಿ ಕೌನ್ಸಿಲ್, ಮೊದಲ ಬಾರಿಗೆ ಜಿಎಸ್ಟಿ ವ್ಯವಸ್ಥೆಯಲ್ಲಿ ರಚನಾತ್ಮಕ ಬದಲಾವಣೆ ಕಡೆಗೆ ಗಮನಹರಿಸಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ಸಂಬಂಧ ಸಚಿವರ ಎರಡು ಗುಂಪುಗಳನ್ನು ರಚಿಸಿದೆ. ತೆರಿಗೆ ದರ, ಸ್ಲ್ಯಾಬ್, ವಿನಾಯಿತಿ ಪಟ್ಟಿ ಮತ್ತು ವ್ಯವಸ್ಥೆಯ ಉತ್ತಮ ಅನುಸರಣೆಗಾಗಿ ತಂತ್ರಜ್ಞಾನದ ಬಳಕೆಯನ್ನು ಗಮನಿಸಿ ವರದಿ ನೀಡುವಂತೆ ಸಚಿವರ ಗುಂಪುಗಳಿಗೆ ಸಮಿತಿ ಸೂಚಿತ್ತು. ಈ ಸಮಿತಿಗಳು ಈ ತಿಂಗಳಲ್ಲೇ ವರದಿ ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ ತಲೆಬಿಸಿ: ದೇಶಾದ್ಯಂತ ಜಿಎಸ್ಟಿ ಜಾರಿಗೊಳಿಸಿದ ವೇಳೆ ರಾಜ್ಯಗಳಿಗೆ ಐದು ವರ್ಷಗಳ ಕಾಲ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈ ಐದು ವರ್ಷಗಳ ಕಾಲಾವಧಿ ಈ ವರ್ಷ ಜೂನ್ ತಿಂಗಳಿಗೆ ಮುಕ್ತಾಯವಾಗುತ್ತಿದೆ. ಈ ನಡುವೆ, ರಾಜ್ಯಗಳಲ್ಲಿ ಸೆಸ್ ಸಂಗ್ರಹದ ಅವಕಾಶವನ್ನು ವಿಸ್ತರಿಸಲಾಗಿದೆ. ಆದರೂ, ಇದರಿಂದ ಸಂಗ್ರಹವಾದ ಆದಾಯ ಈಗಾಗಲೇ ಪಡೆದುಕೊಂಡ ಸಾಲ ಮರುಪಾವತಿಸಲು ಹೋಗಿಬಿಡುತ್ತದೆ. ಹೀಗಾಗಿ ತೆರಿಗೆ ಆದಾಯದ ಕೊರತೆ ಅನುಭವಿಸುತ್ತಿರುವ ರಾಜ್ಯ ಸರ್ಕಾರಗಳಿಗೆ ಇದು ಚಿಂತೆಯನ್ನು ತಂದಿಟ್ಟಿದೆ.
ಎರಡು ಸಮಿತಿಗಳ ಕಾರ್ಯ
- ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವರ ಸಮಿತಿ ಜಿಎಸ್ಟಿ ತೆರಿಗೆ ದರವನ್ನು ತರ್ಕಬದ್ಧಗೊಳಿಸುವಿಕೆ ಸಂಬಂಧ ಶಿಫಾರಸು ನೀಡಲಿದೆ.
- ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ರಾಜ್ಯ ಸಚಿವರ ಸಮಿತಿ ಜಿಎಸ್ಟಿ ವ್ಯವಸ್ಥೆ ಸುಧಾರಣೆ ಕುರಿತು ಶಿಫಾರಸು ಸಲ್ಲಿಸಲಿದೆ.
ಪರಿಹಾರ ಏನು?: ಜಿಎಸ್ಟಿ ಪರಿಣತರ ಪ್ರಕಾರ, ಜಿಎಸ್ಟಿ ಆದಾಯ ವೃದ್ಧಿ ಒಂದೇ ಸದ್ಯ ಉಳಿದುಕೊಂಡಿರುವುದು ಒಂದೇ ದಾರಿ. ಇದನ್ನು ಒಂದೋ ಆಡಳಿತಾತ್ಮಕವಾಗಿ ಸಾಧಿಸಬೇಕು ಅಥವಾ ಜಿಎಸ್ಟಿ ದರಗಳ ರಚನಾತ್ಮಕ ವಿನ್ಯಾಸ ಮರು ಹೊಂದಿಸುವಿಕೆ ಯೊಂದಿಗೆ ಸಾಧಿಸಬೇಕು. ಅಂದರೆ ವಿನಾಯಿತಿ ರದ್ದುಗೊಳಿಸಿ, ಸುಂಕ ವಿಲೋಮವನ್ನು ಕಡಿತಗೊಳಿಸಬೇಕು. ಅದೇ ರೀತಿ ಸ್ಲ್ಯಾಬ್ಗಳನ್ನು ಕಡಿಮೆ ಮಾಡಬೇಕು.