ಬೆಂಗಳೂರು: ಹಿಜಾಬ್ ವಿವಾದದ ನಡುವೆಯೇ ಉಡುಪಿಯಲ್ಲಿ ವಿವಿಧ ಧರ್ಮಗಳ ಹಿನ್ನೆಲೆಯ ಶಾಲಾ ವಿದ್ಯಾರ್ಥಿನಿಯರು ಕೈ ಹಿಡಿದು ಒಟ್ಟಿಗೇ ಕಾಲೇಜಿಗೆ ತೆರಳುತ್ತಿರುವ 'ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್'ನ ಫೋಟೊವನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ನನ್ನ ಭಾರತ, ನಾವು ಒಗ್ಗಟ್ಟಾಗಿದ್ದೇವೆ' ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ವಿವಾದದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಕಾಲೇಜುಗಳನ್ನು ಬುಧವಾರ ಮತ್ತೆ ಆರಂಭಿಸಲಾಗಿತ್ತು. ಶಾಲೆಗಳಲ್ಲಿನ ಭಾವೈಕ್ಯತೆಯನ್ನು ಪ್ರತಿಬಿಂಬಿಸುವ ಚಿತ್ರವನ್ನು 'ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ನ' ಛಾಯಾಗ್ರಹಕ ಇರ್ಷಾದ್ ಮೊಹಮದ್ ಕ್ಲಿಕ್ಕಿಸಿದ್ದರು. ಈ ಚಿತ್ರ ಎರಡೂ ಪತ್ರಿಕೆಗಳ ಗುರುವಾರದ (ಫೆ. 17ರ) ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾಗಿತ್ತು.
'ಡೆಕ್ಕನ್ ಹೆರಾಲ್ಡ್'ನಲ್ಲಿ ಪ್ರಕಟವಾಗಿರುವ ಚಿತ್ರನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ' ನಾವು ಒಟ್ಟಾಗಿದ್ದೇವೆ... ನನ್ನ ಭಾರತ' ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ತಾಣಗಳಲ್ಲೂ ಚಿತ್ರ ವೈರಲ್
ಭಾವೈಕ್ಯತೆಯನ್ನು ಬಿಂಬಿಸುವ ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗಿದೆ. ಹಲವರು ಈ ಫೋಟೊವನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.