ನವದೆಹಲಿ: ಬೆಂಗಳೂರಿನಲ್ಲಿ 8 ವರ್ಷಗಳ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿರುವ ಬ್ಯಾಂಕ್ ಒಂದರ ಉದ್ಯೋಗಿಗೆ ₹ 1.41 ಕೋಟಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ವಿಮಾ ಕಂಪೆನಿಗೆ ಆದೇಶಿಸಿದೆ.
ನವದೆಹಲಿ: ಬೆಂಗಳೂರಿನಲ್ಲಿ 8 ವರ್ಷಗಳ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿರುವ ಬ್ಯಾಂಕ್ ಒಂದರ ಉದ್ಯೋಗಿಗೆ ₹ 1.41 ಕೋಟಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ವಿಮಾ ಕಂಪೆನಿಗೆ ಆದೇಶಿಸಿದೆ.
ಪರಿಹಾರ ಮೊತ್ತವನ್ನು ₹ 94.37 ಲಕ್ಷದಿಂದ ₹ 1.25 ಕೋಟಿಗೆ ಹೆಚ್ಚಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಗಾಯಾಳು ಬೆನ್ಸನ್ ಜಾರ್ಜ್ ಎಂಬುವವರು ತಮ್ಮ ತಾಯಿಯ ಮೂಲಕ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಬಿ.ವಿ. ನಾಗರತ್ನಾ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
2013ರಲ್ಲಿ ಸಂಭವಿಸಿದ್ದ ಅಪಘಾತದ ವೇಳೆ 29 ವರ್ಷ ವಯಸ್ಸಿನವರಾಗಿದ್ದ ಅರ್ಜಿದಾರರು, ಮಿದುಳಿಗೆ ಆಗಿರುವ ಗಾಯದಿಂದ ಬಳಲುತ್ತಿದ್ದು, ಈಗಲೂ ಕೋಮಾದಲ್ಲಿದ್ದಾರೆ. ಸುದೀರ್ಘ ಅವಧಿಯಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವುದನ್ನು ಗಮನಿಸಿದ ನ್ಯಾಯಪೀಠ, ತಲೆಗೆ ಪೆಟ್ಟಾಗಿ ಆಘಾತಕ್ಕೆ ಒಳಗಾಗಿರುವುದಕ್ಕೆ ವಿಮಾ ಕಂಪೆನಿ ಪ್ರತ್ಯೇಕವಾಗಿ ಘೋಷಿಸಿದ್ದ ₹ 1 ಲಕ್ಷ ಮೊತ್ತದ ಪರಿಹಾರವನ್ನು ಹೈಕೋರ್ಟ್ ಕೇವಲ ₹ 2 ಲಕ್ಷಕ್ಕೆ ಹೆಚ್ಚಿಸಿ ಪ್ರಮಾದ ಎಸಗಿದೆ. ಈ ಮೊತ್ತವನ್ನು ಕನಿಷ್ಠ ₹ 10 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಹೇಳಿದೆ.
ಅರ್ಜಿದಾರರು ಜೀವನವಿಡೀ ಹಾಸಿಗೆ ಹಿಡಿಯಬೇಕಾಗಿದೆ. ಹಾಗಾಗಿ ತಲೆಗೆ ಪೆಟ್ಟು ಬಿದ್ದ ಪ್ರಕರಣದಲ್ಲಿ ಕೇವಲ ₹ 1 ಲಕ್ಷ ಪರಿಹಾರ ಘೋಷಿಸಿರುವುದು ಅತ್ಯಲ್ಪ ಪ್ತಮಾಣದ್ದಲ್ಲದೆ, ಅಸಮಂಜಸವೂ ಆಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ ಅವಧಿಯಿಂದ ವಾರ್ಷಿಕ ಶೇ 6ರಷ್ಟು ಬಡ್ಡಿಯೊಂದಿಗೆ ₹ 1.42 ಕೋಟಿ ಪಾವತಿಸುವಂತೆ, ಪರಿಹಾರ ನೀಡಬೇಕಿರುವ ವಿಮಾ ಕಂಪೆನಿಯಾದ ರಿಲಯನ್ಸ್ ಜನರಲ್ ಇನ್ಶುರೆನ್ಸ್ ಲಿಮಿಟೆಡ್‌ಗೆ ಆದೇಶಲಾಗಿದೆ.