ಮಾಸ್ಕೋ: ಉಕ್ರೇನ್ ವಿರುದ್ದದ ಯುದ್ಧದ ಮಧ್ಯೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಬಗ್ಗೆ ಜಗತ್ತಿನಾದ್ಯಂತ ತೀವ್ರ ಚರ್ಚೆಯಾಗುತ್ತಿದೆ. ನ್ಯಾಟೋ ಪಡೆಗಳನ್ನು ತನ್ನ ಸನ್ನಿಹಕ್ಕೆ ಬಿಟ್ಟುಕೊಳ್ಳದಿರುವ ಮಾತಿಗೆ ಬಗ್ಗದ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸಿರುವ ವಾಡ್ಲಿಮಿರ್ ಪುಟಿನ್ ಅವರ ಕುಟುಂಬದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಕೆಲವೊಮ್ಮೆ ಅವರ ಐಷಾರಾಮಿ ಜೀವನ, ಹವ್ಯಾಸ, ಅರಮನೆ ಫೋಟೋಗಳು ಸೋರಿಕೆಯಾಗಿದ್ದವು. ಆದರೆ, ಅವರ ಕುಟುಂಬದ ಮಾಹಿತಿ ಮಾತ್ರ ಬಹಿರಂಗವಾಗಿರಲಿಲ್ಲ.
ಕೆಲ ಸಮಯದ ಹಿಂದೆ ಕೋವಿಡ್ ವ್ಯಾಕ್ಸಿನೇಷನ್ ಸಮಯದಲ್ಲಿ ತಮ್ಮ ಮಗಳ ಬಗ್ಗೆ ಚರ್ಚೆ ಮಾಡಿದ್ದರು. ತಮ್ಮ ಮಗಳಿಗೆ ಲಸಿಕೆ ನೀಡಲಾಗಿದೆಯೋ ಅಥವಾ ಇಲ್ಲವೇ ಅನ್ನೋ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಪುಟಿನ್ ತನ್ನ ಹೆಣ್ಣು ಮಕ್ಕಳ ಗುರುತನ್ನು ಎಂದಿಗೂ ಬಹಿರಂಗಪಡಿಸಿರಲಿಲ್ಲ. ತನಗೆ ಕೇವಲ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಅವರು ಹೇಳಿರುವುದನ್ನು ಹೆಚ್ಚಿನ ಜನರು ಕೇಳಿದ್ದಾರೆ. ಆದರೆ, ಅವರ ಕುಟುಂಬ ಯಾವಾಗಲೂ ಜನರಿಂದ ದೂರು ಇರುತ್ತದೆ.
ತನ್ನ ಮೊದಲ ಪತ್ನಿಯಿಂದ ವಿಚ್ಚೇದನ ಪಡೆದಿರುವುದಾಗಿ ರಷ್ಯಾ ಅಧ್ಯಕ್ಷ ಸ್ವತ: ಟಿವಿ ಚಾನೆಲ್ ವೊಂದರಲ್ಲಿ ಪ್ರಕಟಿಸಿದ್ದರು. ಪುಟಿನ್ ಅವರ ಮಾಜಿ ಪತ್ನಿ ಹೆಸರು ಲ್ಯುಡ್ಮಿಲಾ. ಇವರು ಮದುವೆಗೆ ಮೊದಲು ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅದು ಆ ಸಮಯದಲ್ಲಿ ತುಂಬಾ ಒಳ್ಳೆಯ ಕೆಲಸವಾಗಿತ್ತು. 1980ರ ದಶಕದ ಆರಂಭದಲ್ಲಿ ಇಬ್ಬರೂ ಥಿಯೇಟರ್ ನಲ್ಲಿ ಭೇಟಿಯಾಗಿದ್ದರು. ಇಬ್ಬರೂ ಸಮಾನ ಗೆಳೆಯರಿಂದ ಆಹ್ವಾನಿಸಲ್ಪಟ್ಟಿದ್ದರಿಂದ ಪುಟಿನ್ ಹಾಗೂ ಲ್ಯೂಡ್ಮಿಲಾ ಸ್ನೇಹಿತರಾದರು.
ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಹಾಗೂ ಮಾಜಿ ಪತ್ನಿ ಲ್ಯುಡ್ಮಿಲಾ ಅವರಿಗೆ ಮಾರಿಯಾ ವೊರೊಂಟ್ಸಾವಾ ಮತ್ತು ಕಟೆರಿನಾ ಟಿಖೋನೋವಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಾರಿಯಾ ವೊರೊಂಟ್ಸೊವಾ 1985ರಲ್ಲಿ ಲೆನಿನ್ ಗಾರ್ಡನ್ ನಲ್ಲಿ ಜನಿಸಿದರು. ಒಂದು ವರ್ಷದ ನಂತರ ಕಟೆರಿನಾ ಟಿಖೋನೋವಾ ಜರ್ಮನಿಯಲ್ಲಿ 1986ರಲ್ಲಿ ಜನಿಸಿದರು. ಇಬ್ಬರು ಹೆಣ್ಣು ಮಕ್ಕಳಿಗೂ ಅಜ್ಜಿಯ ಹೆಸರನ್ನು ಇಡಲಾಗಿದೆ.
ಪುಟಿನ್ ತನ್ನ ಕುಟುಂಬದೊಂದಿಗೆ 1996ರಲ್ಲಿ ಮಾಸ್ಕೋಗೆ ತೆರಳಿದರು. ಅಲ್ಲಿ ಅವರ ಹೆಣ್ಣು ಮಕ್ಕಳಾದ ವೊರೊಂಟೊವಾ ಮತ್ತು ಟಿಖೋನೊವಾ ಜರ್ಮನ್ ಭಾಷಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ವೇಳೆ ಪುಟಿನ್ 1999ರಲ್ಲಿ ಕಾರ್ಯಕಾರಿ ಅಧ್ಯಕ್ಷರಾದ ನಂತರ ಅವರ ಮಕ್ಕಳನ್ನು ಶಾಲೆಯಿಂದ ಬಿಡಿಸಿ , ಮನೆಯಿಂದಲೇ ಓದಿಸಲಾಗುತಿತ್ತು. ಪುಟಿನ್ ಅವರ ಇಬ್ಬರೂ ಪುತ್ರಿಯರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ನಕಲಿ ಗುರುತಿನೊಂದಿಗೆ ಕಾಲೇಜಿಗೆ ಪ್ರವೇಶ ಪಡೆದಿದ್ದರು.
ವೊರೊಂಟ್ಸೊವಾ ಮೊದಲು ಜೀವಶಾಸ್ತ್ರ ಮತ್ತು ನಂತರ ವೈದ್ಯಕೀಯ ಅಧ್ಯಯನ ಮಾಡಿದರು. ಟಿಖೋನೋವಾ ಏಷ್ಯನ್ ವಿಷಯದಲ್ಲಿ ಅಧ್ಯಯನ ಮಾಡಿದರು. ವೊರೊಂಟ್ಸೂವಾ ಮಾಸ್ಕೋದಲ್ಲಿ ವೈದ್ಯಕೀಯ ಸಂಶೋಧಕರಾಗಿದ್ದಾರೆ ಮತ್ತು ಜೋರಿಟ್ ಫಾಸೆನ್ ಎಂಬರನ್ನು ವಿವಾಹವಾಗಿರುವುದಾಗಿ ಹೇಳಲಾಗುತ್ತಿದೆ. ಇಬ್ಬರಿಗೂ ಒಂದು ಮಗು ಕೂಡಾ ಇದೆ ಎಂದು ವರದಿಯಾಗಿದೆ.
ಟಿಖೋನೋವಾ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಜೆದಿದ್ದು, ರಾಕ್ ಎನ್ ರೋಲ್ ಡ್ಯಾನ್ಸರ್ ಕೂಡಾ ಆಗಿದ್ದಾರೆ. ಬಳಿಕ ಟಿಖೋನೋವಾ ಮಾಸ್ಕೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್ಸಿಟಿಟ್ಯೂಟ್ ಮುಖ್ಯಸ್ಥರಾಗಿದ್ದಾರೆ. 2013ರಲ್ಲಿ ಟಿಖೋನೋವಾ ರಷ್ಯಾದ ಬಿಲಿಯನೇರ್ ಕಿರಿಲ್ ಶಮಾಲೋವ್ ಅವರನ್ನು ವಿವಾಹವಾಗಿರುವುದಾಗಿ ಹೇಳಲಾಗುತ್ತದೆ. ಆದರೆ, ಐದು ವರ್ಷಗಳ ಬಳಿಕ ಇಬ್ಬರೂ ವಿಚ್ಚೇದನ ಪಡೆದುಕೊಂಡಿದ್ದಾರೆ.