ನವದೆಹಲಿ :ಕೋವಿಡ್ ಎರಡನೇ ಅಲೆಯ ಉತ್ಕರ್ಷದ ಸಂದರ್ಭ ಗಂಗಾ ನದಿಯಲ್ಲಿ ತೇಲಿ ಬಂದ ಮೃತದೇಹಗಳ ಸಂಖ್ಯೆ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ಕೇಂದ್ರ ಸರಕಾರ ರಾಜ್ಯ ಸಭೆಯಲ್ಲಿ ಸೋಮವಾರ ತಿಳಿಸಿದೆ. ''ಗಂಗಾ ನದಿಗೆ ಎಸೆಯಲಾಗಿದೆ ಎಂದು ಹೇಳಲಾದ ಕೋವಿಡ್ ನಿಂದ ಮೃತಪಟ್ಟವರ ಮೃತದೇಹಗಳ ಸಂಖ್ಯೆಯ ಬಗ್ಗೆ ಮಾಹಿತಿ ಲಭ್ಯವಿಲ್ಲ'' ಎಂದು ಜಲ ಶಕ್ತಿ ಖಾತೆಯ ಸಹಾಯಕ ಸಚಿವ ಬಿಶ್ವೇಶ್ವರ ಟುಡು ಅವರು ಹೇಳಿದ್ದಾರೆ.
ಕೋವಿಡ್ ಶಿಷ್ಟಾಚಾರಗಳಿಗೆ ಅನುಗುಣವಾಗಿ ಮೃತದೇಹಗಳನ್ನು ವಿಲೇವಾರಿ ಮಾಡಲು ಕೈಗೊಂಡ ಕ್ರಮಗಳ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದ ಎಂ.ಪಿ. ಡೆರಿಕ್ ಒಬ್ರಿಯಾನ್ ಅವರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಅವರು ಈ ಪ್ರತಿಪಾದನೆ ಮಾಡಿದ್ದಾರೆ. ಗಂಗಾ ನದಿ ಹಾಗೂ ಅದರ ದಡದಲ್ಲಿ ವಾರಸುದಾರರಿಲ್ಲದ/ಅಪರಿಚಿತ, ಸುಟ್ಟ/ಭಾಗಶಃ ಸುಟ್ಟ ಮೃತದೇಹಗಳು ಪತ್ತೆಯಾಗಿವೆ. ಅಲ್ಲದೆ, ಘಟನೆಗಳು ಉತ್ತರಪ್ರದೇಶ ಹಾಗೂ ಬಿಹಾರ ಜಿಲ್ಲೆಗಳಲ್ಲಿ ವರದಿಯಾಗಿವೆ ಎಂದು ಅವರು ತಿಳಿಸಿದರು.
ಮೃತದೇಹಗಳ ವಿಲೇವಾರಿ ಸೇರಿದಂತೆ ಮೃತದೇಹಗಳ ಸಂಖ್ಯೆ ಹಾಗೂ ತೆಗೆದುಕೊಂಡ ಕ್ರಮಗಳ ಬಗ್ಗೆ ಸಚಿವಾಲಯ (ಸ್ವಚ್ಛ ಗಂಗಾ ರಾಷ್ಟ್ರೀಯ ಯೋಜನೆ) ಸಂಬಂಧಿತ ರಾಜ್ಯ ಸರಕಾರಗಳಿಂದ ವರದಿ ಕೋರಿದೆ ಎಂದು ಅವರು ಹೇಳಿದರು. ಉತ್ತರಾಖಂಡ, ಜಾರ್ಖಂಡ್ ಹಾಗೂ ಪಶ್ಚಿಮಬಂಗಾಳದ ಮುಖ್ಯ ಕಾರ್ಯದರ್ಶಿಗಳಿಗೆ ಸಲಹೆಗಳನ್ನು ಕೂಡ ಜಾರಿಗೊಳಿಸಲಾಗಿದೆ ಎಂದು ಸಚಿವ ಬಿಶ್ವೇಶ್ವರ ಟುಡು ತಿಳಿಸಿದರು.