HEALTH TIPS

ರಾಷ್ಟ್ರೀಯ ಹೆದ್ದಾರಿ ಉದ್ದ: ಲೆಕ್ಕಾಚಾರ ಗೊಂದಲದ ಗೂಡು

               ದೇಶದಲ್ಲಿ ಈಗ ಒಟ್ಟು 1.40 ಲಕ್ಷ ಕಿ.ಮೀ.ನಷ್ಟು ಉದ್ದದ ರಾಷ್ಟ್ರೀಯ ಹೆದ್ದಾರಿ ಇದೆ ಎನ್ನುತ್ತದೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ 2021-22ನೇ ಸಾಲಿನ ವಾರ್ಷಿಕ ವರದಿ. ಆದರೆ ಇದು ದೇಶದಲ್ಲಿನ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವೇ ಅಥವಾ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ, ಎಲ್ಲಾ ಪಥಗಳನ್ನು ಪ್ರತ್ಯೇಕವಾಗಿ ಲೆಕ್ಕಹಾಕಿದಾಗ ದೊರೆತ ಒಟ್ಟು ಉದ್ದವೇ ಎಂಬುದನ್ನು ಸಚಿವಾಲಯವು ಸ್ಪಷ್ಟಪಡಿಸಿಲ್ಲ.

              ಹೀಗಾಗಿ ಈಗ ದೇಶದಲ್ಲಿ ಎಷ್ಟು ಉದ್ದದ ರಾಷ್ಟ್ರೀಯ ಹೆದ್ದಾರಿ ಇದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ.

              ರಾಷ್ಟ್ರೀಯ ಹೆದ್ದಾರಿ ನಿರ್ಮಾಣವು ಈಗ ಉತ್ತರ ಪ್ರದೇಶದ ಚುನಾವಣೆಯ ವಿಷಯಗಳಲ್ಲಿ ಒಂದು. ಕಳೆದ ವಾರವಷ್ಟೇ ಬಿಜೆಪಿಯ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮಧ್ಯೆ ಟ್ವೀಟ್‌ನಲ್ಲಿ 'ಹೆದ್ದಾರಿ ಸಮರ' ನಡೆದಿತ್ತು. 'ಸ್ವಾತಂತ್ರ್ಯ ನಂತರದಿಂದ 2017ರಲ್ಲಿ ಸಮಾಜವಾದಿ ಪಕ್ಷದ ಆಡಳಿತ ಅಂತ್ಯವಾಗುವವರೆಗೆ ಉತ್ತರ ಪ್ರದೇಶದಲ್ಲಿ 467 ಕಿ.ಮೀ.ನಷ್ಟು ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಮಾತ್ರ ನಿರ್ಮಿಸಲಾಗಿತ್ತು. 2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಿಂದ ಈವರೆಗೆ 1,321 ಕಿ.ಮೀ.ನಷ್ಟು ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ' ಎಂದು ತೇಜಸ್ವಿ ಸೂರ್ಯ ಹೇಳಿದ್ದರು.


ತೇಜಸ್ವಿ ಸೂರ್ಯ ಅವರ ಈ ಹೇಳಿಕೆಯನ್ನು ಹಲವರು ಅಲ್ಲಗೆಳೆದಿದ್ದರು. 'ಹೆದ್ದಾರಿಯ ಉದ್ದವನ್ನು ಲೆಕ್ಕಹಾಕುವ ವಿಧಾನಕ್ಕೆ ಕೇಂದ್ರ ಸರ್ಕಾರವು ಬದಲಾವಣೆ ತಂದಿದೆ. ಹೀಗಾಗಿ ಕಡಿಮೆ ಉದ್ದದ ಹೆದ್ದಾರಿಯನ್ನು ನಿರ್ಮಿಸಿದ್ದರೂ, ಹೆಚ್ಚು ಉದ್ದದ ಹೆದ್ದಾರಿ ನಿರ್ಮಿಸಲಾಗಿದೆ ಎಂದು ತೋರಿಸಲಾಗುತ್ತಿದೆ' ಎಂದು ಸಮಾಜವಾದಿ ಪಕ್ಷವು ಆರೋಪಿಸಿತ್ತು.

             ಹೆದ್ದಾರಿಗಳ ಉದ್ದವನ್ನು ಅಳತೆ ಮಾಡುವ ವಿಧಾನಕ್ಕೆ ಕೇಂದ್ರ ಸರ್ಕಾರವು ಬದಲಾವಣೆ ತಂದಿದ್ದು ನಿಜ. ಈ ಮೊದಲು ನಾಲ್ಕು ಪಥದ ಒಂದು ಕಿ.ಮೀ.ಹೆದ್ದಾರಿಯನ್ನು, ಒಂದು ಕಿ.ಮೀ. ಎಂದೇ ಪರಿಗಣಿಸಲಾಗುತ್ತಿತ್ತು. 2018ರ ಏಪ್ರಿಲ್‌ 1ರಂದು ಈ ಅಳತೆ ವಿಧಾನಕ್ಕೆ ತಿದ್ದುಪಡಿ ತರಲಾಯಿತು. ಒಂದು ಕಿ.ಮೀ. ಉದ್ದದ ಹೆದ್ದಾರಿಯಲ್ಲಿ ನಾಲ್ಕು ಪಥಗಳಿದ್ದರೆ, ಅದನ್ನು ನಾಲ್ಕು ಕಿ.ಮೀ. ಉದ್ದದ ಹೆದ್ದಾರಿ ಎಂದು ಪರಿಗಣಿಸಲಾಯಿತು.

           2018ರ ಏಪ್ರಿಲ್‌ 1ರಂದು ಈ ಬದಲಾವಣೆ ಜಾರಿಗೆ ತಂದರೂ, 2017-18ನೇ ಸಾಲಿಗೆ (2017ರ ಏಪ್ರಿಲ್‌1ಕ್ಕೆ) ಈ ಬದಲಾವಣೆಯನ್ನು ಪೂರ್ವಾನ್ವಯ ಮಾಡಲಾಯಿತು. ಆನಂತರ ಪ್ರತಿ ವರ್ಷ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿಗಳ ಉದ್ದದಲ್ಲಿ ಭಾರಿ ಏರಿಕೆಯಾಗಿದೆ. ಆದರೆ ಈಗ ದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವನ್ನು ಇದೇ ಮಾನದಂಡದಲ್ಲಿ ಲೆಕ್ಕ ಹಾಕಲಾಗಿದೆಯೇ ಎಂಬುದನ್ನು ಸಚಿವಾಲಯವು ಸ್ಪಷ್ಟಪಡಿಸಿಲ್ಲ. ಹೀಗಾಗಿ ದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ನೈಜ ಉದ್ದವೆಷ್ಟು ಎಂಬುದರ ನಿಖರ ಮಾಹಿತಿ ಇಲ್ಲ.

                            ವರದಿಗಳಲ್ಲಿ ವ್ಯತಿರಿಕ್ತ, ಅಸ್ಪಷ್ಟ ಮಾಹಿತಿ

           ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರತಿ ವರ್ಷ ಬಿಡುಗಡೆ ಮಾಡುವ ವಾರ್ಷಿಕ ವರದಿಯಲ್ಲಿ, ಆ ವರ್ಷದಲ್ಲಿ ನಿರ್ಮಿಸಲಾದ ರಸ್ತೆ ಮತ್ತು ಹೆದ್ದಾರಿಗಳ ಉದ್ದದ ಮಾಹಿತಿಯನ್ನು ನೀಡುತ್ತದೆ. ಜತೆಗೆ ಆರ್ಥಿಕ ವರ್ಷದ ಅಂತ್ಯಕ್ಕೆ ದೇಶದಲ್ಲಿರುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವನ್ನು ನೀಡುತ್ತದೆ.

             2021-22ನೇ ಸಾಲಿನ ಆರ್ಥಿಕ ವರ್ಷದ ವಾರ್ಷಿಕ ವರದಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ, ಈ ಆರ್ಥಿಕ ವರ್ಷ ಇನ್ನೂ ಪೂರ್ಣವಾಗಿಲ್ಲ. ಹೀಗಾಗಿ ಈ ವರದಿಯಲ್ಲಿ ನೀಡಲಾಗಿರುವ ಮಾಹಿತಿಗಳು 2021ರ ಡಿಸೆಂಬರ್ 31ರ ಅಂತ್ಯದವರೆಗೆ ಮಾತ್ರ ಅನ್ವಯವಾಗುತ್ತದೆ.

ಆದರೆ, ಈ ವರದಿಯಲ್ಲಿ ಇದೇ ಮೊದಲ ಬಾರಿಗೆ ಹೊಸ ಚಾರ್ಟ್‌ ಒಂದನ್ನು ನೀಡಲಾಗಿದೆ. 2012-13ನೇ ಸಾಲಿನಿಂದ ಪ್ರತೀ ವರ್ಷ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿಯ ಉದ್ದದ ಮಾಹಿತಿ ನೀಡಲಾಗಿದೆ. ಆದರೆ, ಈ ಚಾರ್ಟ್‌ನಲ್ಲಿ ನೀಡಿರುವ ಮಾಹಿತಿಯು, ಈ ಹಿಂದಿನ ವಾರ್ಷಿಕ ವರದಿಗಳಲ್ಲಿ ನೀಡಲಾದ ಮಾಹಿತಿಗಿಂತ ಸಂಪೂರ್ಣ ಭಿನ್ನವಾಗಿದೆ.

        ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿಯ ಉದ್ದವನ್ನು ಈ ಚಾರ್ಟ್‌ನಲ್ಲಿ ಕಡಿಮೆ ತೋರಿಸಲಾಗಿದೆ. ಬಿಜೆಪಿ ಸರ್ಕಾರವು ನಿರ್ಮಿಸಿರುವ ಹೆದ್ದಾರಿಯ ಉದ್ದವನ್ನೂ ಈ ಚಾರ್ಟ್‌ನಲ್ಲಿ ಕಡಿಮೆ ತೋರಿಸಲಾಗಿದೆ.

* ಯುಪಿಎ ಅಧಿಕಾರದ ಅವಧಿಯಲ್ಲಿ 2013-14ರ ಆರ್ಥಿಕ ವರ್ಷದಲ್ಲಿ 13,735 ಕಿ.ಮೀ. ಉದ್ದದಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಅದು ಆವರೆಗಿನ ಗರಿಷ್ಠ ಪ್ರಮಾಣ. ನಿರ್ಮಾಣವಾದ ಒಂದು ಕಿ.ಮೀ. ಹೆದ್ದಾರಿಯಲ್ಲಿ ಎಷ್ಟೇ ಪಥಗಳಿದ್ದರೂ ರಸ್ತೆಯ ಉದ್ದವನ್ನು ಒಂದು ಕಿಲೋಮೀಟರ್‌ ಎಂದೇ ಆಗ ಪರಿಗಣಿಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿರುವುದು ಒಂದು ಬಾರಿ ಮಾತ್ರ

* 2013-14ರಲ್ಲಿ ದೇಶದಲ್ಲಿ ಒಟ್ಟು 13,735 ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣವಾಗಿದೆ ಎಂದು ಆ ಸಾಲಿನ ವಾರ್ಷಿಕ ವರದಿ ಹೇಳುತ್ತದೆ. ಆದರೆ, '2013-14ನೇ ಸಾಲಿನಲ್ಲಿ 4,260 ಕಿ.ಮೀ. ಉದ್ದದಷ್ಟು ರಾಷ್ಟ್ರೀಯ ಹೆದ್ದಾರಿಯನ್ನು ಮಾತ್ರ ನಿರ್ಮಿಸಲಾಗಿದೆ' ಎಂದು 2021-22ನೇ ಸಾಲಿನ ವರದಿಯಲ್ಲಿ ಹೇಳಲಾಗಿದೆ

* 2017-18ರಲ್ಲಿ ಸರ್ಕಾರವು 16,610 ಕಿ.ಮೀ. ಉದ್ದದಷ್ಟು ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿದೆ. ಇದು ಈವರೆಗಿನ ಗರಿಷ್ಠ ನಿರ್ಮಾಣವಾಗಿದೆ. ಆದರೆ ಈ ಆರ್ಥಿಕ ವರ್ಷಕ್ಕೇ ಅನ್ವಯವಾಗುವಂತೆ ಹೆದ್ದಾರಿ ಅಳತೆ ಮಾನದಂಡ ನಿಯಮಗಳನ್ನು ಬದಲಾಯಿಸಲಾಗಿತ್ತು. ರಸ್ತೆಯ ಉದ್ದದ ಲೆಕ್ಕಾಚಾರವು ಯಾವ ಮಾನದಂಡವನ್ನು ಆಧರಿಸಿದೆ ಎಂಬುದನ್ನು ಸರ್ಕಾರವು ಸ್ಪಷ್ಟಪಡಿಸಿಲ್ಲ. ಹಾಗಾಗಿ ಈ ಅವಧಿಯಲ್ಲಿ ಎಷ್ಟು ಉದ್ದದ ಹೆದ್ದಾರಿ ನಿರ್ಮಾಣವಾಗಿದೆ ಎಂಬುದು ಸ್ಪಷ್ಟ ಇಲ್ಲ

* ಈ ಎಲ್ಲಾ ವರದಿಗಳಲ್ಲಿ ನೀಡಲಾಗಿರುವ ದತ್ತಾಂಶವು ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವೇ ಅಥವಾ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಎಲ್ಲಾ ಪಥಗಳನ್ನು ಪ್ರತ್ಯೇಕವಾಗಿ ಲೆಕ್ಕ ಹಾಕಿದಾಗ ಸಿಗುವ ಸಂಖ್ಯೆಯೇ ಎಂಬುದನ್ನು ಸರ್ಕಾರವು ಎಲ್ಲಿಯೂ ಸ್ಪಷ್ಟವಾಗಿ ಹೇಳಿಲ್ಲ. ಹೀಗಾಗಿ ದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದ ಎಷ್ಟು ಎಂಬುದರ ಮಾಹಿತಿ ಲಭ್ಯವಿಲ್ಲ. ದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಎಲ್ಲಾ ಪಥಗಳ ಒಟ್ಟು ಉದ್ದದ ಮಾಹಿತಿಯೂ ಲಭ್ಯವಿಲ್ಲ

* ಸರ್ಕಾರ ನೀಡಿರುವ ಹೆದ್ದಾರಿಯ ಉದ್ದದ ಮಾಹಿತಿಯ ಮಾನದಂಡ ಯಾವುದು ಎಂದು ಸ್ಪಷ್ಟವಾಗದೇ ಇರುವ ಕಾರಣ, ಸರ್ಕಾರವು ಎಷ್ಟು ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿದೆ ಎಂಬುದು ಗೊತ್ತಿಲ್ಲ

                          ಭಾರತಮಾಲಾ ಯೋಜನೆ ಪೂರ್ಣ ಮಾಹಿತಿ ಇಲ್ಲ

            2017ರಲ್ಲಿ 'ಭಾರತಮಾಲಾ' ಎಂಬ ಹೆಸರಿನ ಸಮಗ್ರ ಹೆದ್ದಾರಿ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿತು. ಈ ಯೋಜನೆ ಅಡಿಯಲ್ಲಿ, ಆರ್ಥಿಕ ಕಾರಿಡಾರ್, ಫೀಡರ್ ರಸ್ತೆ, ಗಡಿ ಮತ್ತು ಅಂತರರಾಷ್ಟ್ರೀಯ ರಸ್ತೆ ಸಂಪರ್ಕ, ಕರಾವಳಿ ಮತ್ತು ಬಂದರು ಸಂಪರ್ಕ ಸುಧಾರಣೆ, ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆಗ ಪ್ರಗತಿಯಲ್ಲಿದ್ದ ಎಲ್ಲ ಹೆದ್ದಾರಿ ಕಾಮಗಾರಿಗಳನ್ನು ಮತ್ತು ವಿವಿಧ ಹೆದ್ದಾರಿ ಯೋಜನೆಗಳನ್ನು ಭಾರತಮಾಲಾ ಯೋಜನೆಯ ವ್ಯಾಪ್ತಿಗೆ ತರಲಾಯಿತು.

              ಭಾರತಮಾಲಾ ಯೋಜನೆಯ ಮೊದಲ ಹಂತದಲ್ಲಿ 24,800 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದ (ಎನ್‌ಎಚ್‌ಡಿಪಿ) 10,000 ಕಿಲೋಮೀಟರ್ ಬಾಕಿ ಯೋಜನೆಯನ್ನೂ ಇದಕ್ಕೆ ಸೇರಿಸಿ, ಇದರ ಒಟ್ಟು ಗುರಿ 34,800 ಕಿಲೋಮೀಟರ್ ಎಂದು ನಿಗದಿಪಡಿಸಲಾಗಿತ್ತು. 2022ಕ್ಕೆ ಈ ಗುರಿ ತಲುಪುವ ಉದ್ದೇಶವಿತ್ತು. ಯೋಜನೆ ಆರಂಭವಾದ 2017ರಲ್ಲಿ 34,800 ಕಿಲೋಮೀಟರ್ ರಸ್ತೆ ನಿರ್ಮಾಣದ ಗುರಿ ಘೋಷಣೆಯಾಗಿತ್ತು. ಆದರೆ ಹೆದ್ದಾರಿ ಸಚಿವಾಲಯದ 2019ರ ವಾರ್ಷಿಕ ವರದಿಯಲ್ಲಿ, ಯೋಜನೆಯ ಮೊದಲ ಹಂತದ ರಸ್ತೆ ನಿರ್ಮಾಣದ ಗುರಿ 46,278 ಕಿಲೋಮೀಟರ್ ಎಂದು ನಮೂದಿಸಲಾಗಿದೆ. 34,800 ಕಿಲೋಮೀಟರ್ ಎಂದಿದ್ದ ಗುರಿ 46,278 ಕಿಲೋಮೀಟರ್ ಆಗಿದ್ದು ಹೇಗೆ ಎಂಬುದನ್ನು ವರದಿಯಲ್ಲಿ ಸ್ಪಷ್ಟಪಡಿಸಿಲ್ಲ.

               ಭಾರತಮಾಲಾ ಯೋಜನೆಯ ಮೊದಲ ಹಂತದಲ್ಲಿ ಈ ಮೊದಲು ಹಾಕಿಕೊಂಡಿದ್ದ ಗುರಿಯನ್ನು, ಈ ವರದಿಗಳ ಪ್ರಕಾರ ಈಗಾಗಲೇ ತಲುಪಿಯಾಗಿದೆ. ಈ ಯೋಜನೆ ಅಡಿ ಪ್ರತಿ ಆರ್ಥಿಕ ವರ್ಷದ ಅಂತ್ಯಕ್ಕೆ ನಿರ್ಮಾಣವಾದ ಹೆದ್ದಾರಿಗಳ ಒಟ್ಟು ಉದ್ದವೆಷ್ಟು ಎಂಬುದರ ಮಾಹಿತಿಯನ್ನು ವಾರ್ಷಿಕ ವರದಿಯಲ್ಲಿ ನೀಡಲಾಗುತ್ತಿತ್ತು. ಆದರೆ 2021-22ನೇ ಸಾಲಿನ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ನೀಡಿಲ್ಲ.

                                ನಾಲ್ಕು ಮತ್ತು ಹೆಚ್ಚಿನ ಪಥದ ಹೆದ್ದಾರಿಯ ಉದ್ದ

          ಯುಪಿಎ-2 ಆಡಳಿತದ ಅವಧಿಯಲ್ಲಿ ದೇಶದಲ್ಲಿದ್ದ 4 ಮತ್ತು ಅದಕ್ಕಿಂತಲೂ ಹೆಚ್ಚಿನ ಪಥಗಳ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದಕ್ಕೆ ಹೋಲಿಸಿದರೆ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಇಂತಹ ಹೆದ್ದಾರಿಗಳ ಉದ್ದ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಇಂತಹ ಹೆದ್ದಾರಿಗಳಿಗೆ ಸಂಬಂಧಿಸಿದಂತೆ 2017-18ನೇ ಸಾಲಿನ ಅಂತ್ಯದವರೆಗಿನ ಮಾಹಿತಿ ಮಾತ್ರ ಲಭ್ಯವಿದೆ. ನಂತರದಲ್ಲಿ ಈ ಹೆದ್ದಾರಿಗಳನ್ನು ಭಾರತಮಾಲಾ ಯೋಜನೆ ಒಳಗೆ ಸೇರಿಸಲಾಗಿದೆ. ಆನಂತರ ಇಂತಹ ಹೆದ್ದಾರಿಗಳ ಒಟ್ಟು ಉದ್ದವೆಷ್ಟು ಎಂಬುದರ ನಿಖರ ಮಾಹಿತಿ ಲಭ್ಯವಿಲ್ಲ.

             ಆಧಾರ: 2010-11ನೇ ಸಾಲಿನಿಂದ 2021-22ನೇ ಸಾಲಿನವರೆಗಿನ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವಾರ್ಷಿಕ ವರದಿಗಳು, ಪಿಟಿಐ

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries