ಲೇತಪೋರಾ: ಪುಲ್ವಾಮ ಭಯೋತ್ಪಾದಕ ದಾಳಿಯ ವರ್ಷವಾದ ಸೋಮವಾರ ಸಿಆರ್ಪಿಎಫ್ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಪುಷ್ಪ ನಮನ ಸಲ್ಲಿಸಿತು. ಶ್ರೀನಗರದಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಹುತಾತ್ಮರ ಸ್ಮಾರಕದಲ್ಲಿ ಸಿಆರ್ಪಿಎಫ್ನ ಹೆಚ್ಚುವರಿ ಪ್ರಧಾನ ನಿರ್ದೇಶಕ (ಎಡಿಜಿ) ಡಿ.ಎಸ್.
ಚೌಧರಿ ನೇತೃತ್ವದಲ್ಲಿ ಅರೆ ಸೇನಾ ಪಡೆಯ ಅಧಿಕಾರಿಗಳು ಹಾಗೂ ಯೋಧರು ಪುಷ್ಪ ನಮನ ಸಲ್ಲಿಸಿದರು. ಎಡಿಜಿ ಚೌಧರಿ ಹಾಗೂ ಸಿಆರ್ಪಿಎಫ್ನ ಇತರ ಸಿಬ್ಬಂದಿ ಮೃತಪಟ್ಟ ಯೋಧರ ಸ್ಮಾರಕಕ್ಕೆ ಪುಷ್ಪ ಗುಚ್ಛಗಳನ್ನು ಸಮರ್ಪಿಸಿದರು ಹಾಗೂ ನಮನ ಸಲ್ಲಿಸಿದರು. ಜಮ್ಮುವಿನಿಂದ ಕಾಶ್ಮೀರಕ್ಕೆ ತೆರಳುತ್ತಿದ್ದ ಸೇನಾ ವಾಹನ ವ್ಯೆಹದ ಭಾಗವಾಗಿದ್ದ ಸಿಆರ್ಪಿಎಫ್ನ ಬಸ್ಸೊಂದರ ಮೇಲೆ ಆತ್ಮಾಹುತಿ ಬಾಂಬರ್ನೋರ್ವ ಸ್ಫೋಟಕ ತುಂಬಿದ ವಾಹನವನ್ನು ಢಿಕ್ಕಿ ಹೊಡೆಸಿದ್ದ. ಈ ದುರಂತದಲ್ಲಿ 40 ಯೋಧರು ಸಾವನ್ನಪ್ಪಿದ್ದರು. ''ಪುಲ್ವಾಮ ದಾಳಿಯಲ್ಲಿ ಪ್ರಾಣ ಕಳೆದಕೊಂಡ 40 ಮಂದಿ ವೀರ ಯೋಧರನ್ನು ಸ್ಮರಿಸಲು ನಾವು ಪ್ರತಿವರ್ಷ ಈ ದಿನ ಇಲ್ಲಿ ಸೇರುತ್ತೇವೆ. ನಾವು ಅವರ ಬಲಿದಾನವನ್ನು ನೆನಪಿಸಿಕೊಳ್ಳುತ್ತೇವೆ ಹಾಗೂ ನಮ್ಮ ಹೃದಯಾಂತರಾಳದಿಂದ ಶ್ರದ್ಧಾಂಜಲಿ ಸಲ್ಲಿಸುತ್ತೇವೆ'' ಎಂದು ಚೌಧರಿ ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರಿಗೆ ತಿಳಿದ್ದಾರೆ. ಸಹೋದ್ಯೋಗಿಗಳನ್ನು ನೆನಪಿಸಿಕೊಂಡ ಸಿಆರ್ಪಿಎಫ್ ಯೋಧ, 40 ಯೋಧರ ಸಾವಿಗೆ ಕಾರಣವಾದ ಪುಲ್ವಾಮ ಭಯೋತ್ಪಾದಕ ದಾಳಿ ಸೇನೆಯ ಸ್ಥೈರ್ಯವನ್ನು ಕುಂದಿಸಿಲ್ಲ ಎಂದರು.