ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 5ನೇ ದಿನಕ್ಕೆ ಕಾಲಿಟ್ಟಿದ್ದು ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರೂ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿರುವುದರಿಂದ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಇದೀಗ ಕೇಂದ್ರ ಸಚಿವರ ತಂಡ ಉಕ್ರೇನ್ ನ ನೆರೆರಾಷ್ಟ್ರಗಳಿಗೆ ತೆರಳಿದೆ.
ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಆರ್‌ಕೆ ಸಿಂಗ್ ಅವರು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಸಂಘಟಿಸಲು ಮತ್ತು ಸಹಾಯ ಮಾಡಲು ನೆರೆಯ ದೇಶಗಳಿಗೆ ತೆರಳಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ಸಚಿವರುಗಳು ಭಾರತದ 'ವಿಶೇಷ ರಾಯಭಾರಿಗಳಾಗಿ' ಅಲ್ಲಿಗೆ ಹೋಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಲವು ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು.
ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರವನ್ನು ತ್ವರಿತಗೊಳಿಸಲು ಉಕ್ರೇನ್‌ನ ನೆರೆಯ ರಾಷ್ಟ್ರಗಳೊಂದಿಗೆ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
249 ಭಾರತೀಯರನ್ನು ಹೊತ್ತು ದೆಹಲಿಗೆ ಬಂದಿಳಿದ ಏರ್ ಇಂಡಿಯಾದ ಐದನೇ ವಿಮಾನ!
ರಷ್ಯಾದ ಸೇನಾ ದಾಳಿಯ ನಡುವೆ ಉಕ್ರೇನ್‌ನಲ್ಲಿ ಸಿಲುಕಿರುವ 249 ಭಾರತೀಯರನ್ನು ಏರ್ ಇಂಡಿಯಾದ ಐದನೇ ಸ್ಥಳಾಂತರಿಸುವ ವಿಮಾನ ಸೋಮವಾರ ಬೆಳಿಗ್ಗೆ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ದೆಹಲಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.