ಕಾಸರಗೋಡು: ಜಿಲ್ಲೆಯಲ್ಲಿ ನಕಲಿ ಅಕ್ಷಯ ಕೇಂದ್ರಗಳು ಹಾಗೂ ಆನ್‍ಲೈನ್ ಸೇವಾ ಕೇಂದ್ರಗಳ ಬಗ್ಗೆ ಜನರು ಜಾಗ್ರತೆ ಪಾಲಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಮಂಜೂರುಗೊಳಿಸಿರುವ ಅಕ್ಷಯ ಕೇಮದ್ರಗಳಿಗೆ ಸಮಾನಾಂತರ ಹೆಸರನ್ನಿರಿಸಿ ನಕಲಿ ಅಕ್ಷಯ ಕೇಂದ್ರಗಳು ಕಾರ್ಯಾಚರಿಸುತ್ತಿದೆ. ನಕಲಿ ಅಕ್ಷಯ ಕೇಂದ್ರ ಹಾಗೂ ಆನ್‍ಲೈನ್ ಸೆಂಟರ್‍ಗಳ ಮೂಲಕ ಸಲ್ಲಿಸುವ ಮಹತ್ವದ ದಾಖಲೆಗಳು, ವೈಯಕ್ತಿಕ ವಿವರಗಳು ದುರುಪಯೋಗವಾಗುತ್ತಿರುವುದನ್ನು ಪೊಲೀಸ್ ಇಂಟೆಲಿಜೆನ್ಸ್ ವಿಭಾಗ ಪತ್ತೆಹಚ್ಚಿದೆ. ಈ ಬಗ್ಗೆ ಎಲ್ಲ ಪಂಚಾಯಿತಿಗಳಿಗೂ ಮಾಹಿತಿ ರವಾನಿಸಲಾಗಿದೆ. ಸಾರ್ವಜನಿಕರು ಯಾವುದೇ ಅರ್ಜಿ ಸಲ್ಲಿಕೆ, ವೈಯಕ್ತಿಕ ವಿವರ, ದಾಖಲೆ ಸಮರ್ಪಿಸಲು ತೆರಳುವ ಅಕ್ಷಯ ಕೇಂದ್ರಗಳು, ಆನ್‍ಲೈನ್ ಕೇಂದ್ರಗಳು ಸರ್ಕಾರಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಅಕ್ಷಯ ಮುಖ್ಯ ಕೋರ್ಡಿನೇಟರ್ ಆಗಿರುವ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ತಿಳಿಸಿದ್ದಾರೆ.
ಸರ್ಕಾರಿ ಸೇವೆಗಳನ್ನು ಒದಗಿಸಲು ಅಂಗೀಕಾರ ಹೊಂದಿರುವುದಾಗಿ ಸುಳ್ಳು ಪ್ರಚಾರ ನಡೆಸಿ, ಅಲ್ಲಲ್ಲಿ ನಕಲಿ ಆನ್‍ಲೈನ್ ಸೆಂಟರ್ ಹಾಗೂ ಅಕ್ಷಯ ಕೇಂದ್ರಗಳನ್ನು ತೆರೆದು ಜನರನ್ನು ವಂಚಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಆಯಾ ತಾಲೂಕಿನ ತಹಸೀಲ್ದಾರ್‍ಗಳು ಸಮಗ್ರ ತನಿಖೆ ನಡೆಸಿ, ಇಂತಹ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆದೇಶ-3ರ ಪ್ರಕಾರ ಹೊಸ ಆನ್‍ಲೈನ್ ಸಂಸ್ಥೆ ಆರಂಭಕ್ಕೆ ಸ್ಥಳೀಯಾಡಳಿತ ಸಂಸ್ಥೆ ಪರವಾನಗಿ ನೀಡುವ ಸಂದರ್ಭ ಅನುಮತಿ ನೀಡಲಾದ ನಿಗದಿತ ಸೇವೆಗಳಲ್ಲದೆ ಇತರ ಸೇವೆ ನೀಡುತ್ತಿದ್ದರೆ, ಇವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಅಧಿಕೃತ ಜನಸೇವಾ ಕೇಂದ್ರಗಳು ಬೇಕಾಗಿದ್ದಲ್ಲಿ ಮಾನದಂಡ ಪ್ರಕಾರ ಒದಗಿಸಿಕೊಡಲು ಆಯಾ ಸ್ಥಳೀಯಾಡಳಿತ ಸಂಸ್ಥೆಗಳು ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.