ನವದೆಹಲಿ :ಡೇಟಾ ಕೇಂದ್ರಗಳು ಮತ್ತು ಇಂಧನ ಶೇಖರಣೆಯನ್ನೂ ಇನ್‌ಫ್ರಾಸ್ಟ್ರಕ್ಚರ್ ಸೊತ್ತುಗಳು ಎಂದು ವರ್ಗೀಕರಿಸುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳಲಿರುವ ಕ್ರಮಗಳು ಈ ಕ್ಷೇತ್ರದ ಸಂಸ್ಥೆಗಳಿಗೆ ಅಗ್ಗದ ದರದಲ್ಲಿ ದೀರ್ಘಾವದಿ ಸಾಲ ದೊರಕಲು ಸಹಾಯ ಮಾಡುವುದರಿಂದ ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಾದ ಗೌತಮ್ ಅದಾನಿ, ಸುನೀಲ್ ಮಿತ್ತಲ್ ಮತ್ತು ಮುಕೇಶ್ ಅಂಬಾನಿ ಅವರ ಸಂಸ್ಥೆಗಳಿಗೆ ಈ ಕ್ಷೇತ್ರಗಳಲ್ಲಿ ದಾಪುಗಾಲಿಡಲು ಸಹಾಯ ಮಾಡಲಿದೆ ಎಂದು ನಂಬಲಾಗಿದೆ ಎಂದು ndtv.com ವರದಿ ಮಾಡಿದೆ.
"ಡೇಟಾ ಕೇಂದ್ರಗಳು ಮತ್ತು ದಟ್ಟ ಚಾರ್ಜಿಂಗ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಗ್ರಿಡ್ ಸ್ಕೇಲ್ ಬ್ಯಾಟರಿ ವ್ಯವಸ್ಥೆ ಸಹಿತ ಇಂಧನ ಶೇಖರಣೆ ವ್ಯವಸ್ಥೆಗಳನ್ನು ಇನ್‌ಫ್ರಾಸ್ಟ್ರಕ್ಚರ್ ಪಟ್ಟಿಯಲ್ಲಿ ಸೇರಿಸಲಾಗುವುದು,'' ಎಂದು ಮಂಗಳವಾರ ತಮ್ಮ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದು ಡಿಜಿಟಲ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಶುದ್ಧ ಇಂಧನ ಶೇಖರಣೆಗೆ ಸಾಲ ಸೌಲಭ್ಯಕ್ಕೆ ಅನುಕೂಲ ಕಲ್ಪಿಸಲಿದೆ ಎಂದು ಅವರು ಹೇಳಿದ್ದಾರೆ.
ಎಪ್ರಿಲ್ 1 ರಿಂದ ಜಾರಿಗೆ ಬರಲಿರುವ ಈ ನೀತಿಯಲ್ಲಿನ ಬದಲಾವಣೆಯು ಆನ್‌ಲೈನ್ ಪಾವತಿಗಳು, ಇ-ಕಾಮರ್ಸ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿಯ ನಡುವೆ ಡೇಟಾವನ್ನು ಗಡಿಯೊಳಗೇ ಇರುವಂತೆ ನೋಡಿಕೊಲ್ಳುವ ಉದ್ದೇಶವನ್ನು ಹೊಂದಿದೆ.
ಇದರ ಹೊರತಾಗಿ 5ಜಿ ಟೆಲಿಕಾಂ ಸೇವೆಗಳ ಆರಂಭವು ಡೇಟಾ ಸೆಂಟರ್ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸುವುದರಿಂದ ಅದಾನಿ ಮತ್ತು ಮಿತ್ತಲ್ ಇವರುಗಳಿಗೆ ಲಾಭವಾಗಲಿದೆ. ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಕೂಡ ಗಿಗಾಫ್ಯಾಕ್ಟರೀಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ಇಂಧನ ಶೇಖರಣೆಯ ನಿಟ್ಟಿನಲ್ಲೂ ಬೃಹತ್ ಹೂಡಿಕೆ ಮಾಡುತ್ತಿದ್ದು ಸರಕಾರದ ನೀತಿ ಅಂಬಾನಿ ಸಂಸ್ಥೆಗೂ ಪೂರಕವಾಗಲಿದೆ ಎಂದೇ ನಂಬಲಾಗಿದೆ ಎಂದು ವರದಿಯಾಗಿದೆ.
ಅದಾನಿ ಸಂಸ್ಥೆಯು ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ನವದೆಹಲಿಯಲ್ಲಿ ಡೇಟಾಕೇಂದ್ರಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದರೆ, ಭಾರತಿ ಏರ್‌ಟೆಲ್ ಸಂಸ್ಥೆ ತನ್ನ ಡೇಟಾ ಸೆಂಟರ್ ಸಾಮರ್ಥ್ಯವನ್ನು 2025ರ ವೇಳೆಗೆ 400 ಮೆಗಾವಾಟ್ಸ್ ಗೆ ಏರಿಕೆ ಮಾಡಲು ದೊಡ್ಡ ಮೊತ್ತದ ಹೂಡಿಕೆ ಕುರಿತು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಘೋಷಿಸಿತ್ತು.
ಆದರೆ ಸರಕಾರದ ನಿರ್ಧಾರ ಕುರಿತಂತೆ ಅದಾನಿ, ರಿಲಯನ್ಸ್ ಅಥವಾ ಭಾರತಿ ಏರ್‌ಟೆಲ್ ಸಂಸ್ಥೆ ಇನ್ನೂ ಪ್ರತಿಕ್ರಿಯಿಸಿಲ್ಲ.