ನವದೆಹಲಿ: ನೇಪಾಳವು ಭಾರತದ UPI ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ಹೊರ ದೇಶವಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ( NPCI) ಹೇಳಿದೆ.
ಇದು ನೆರೆಯ ದೇಶದ ಡಿಜಿಟಲ್ ಆರ್ಥಿಕತೆಯನ್ನು ಬಲಪಡಿಸಲು ಗಮನಾರ್ಹವಾಗಿ ಸಹಾಯ ಮಾಡುತ್ತದೆ. NPCIನ ಅಂತಾರಾಷ್ಟ್ರೀಯ ಅಂಗವಾಗಿರುವ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL), ನೇಪಾಳದಲ್ಲಿ ಸೇವೆಗಳನ್ನು ನೀಡಲು ಗೇಟ್‌ವೇ ಪಾವತಿ ಸೇವೆ (GPS) ಮತ್ತು ಮನಮ್ ಇನ್ಫೋಟೆಕ್‌ನೊಂದಿಗೆ ಕೈಜೋಡಿಸಿದೆ.
GPS ನೇಪಾಳದಲ್ಲಿನ ಅಧಿಕೃತ ಪಾವತಿ ಸಿಸ್ಟಮ್ ಆಪರೇಟರ್ ಆಗಿದೆ. ಮನಮ್ ಇನ್ಫೋಟೆಕ್ ನೇಪಾಳದಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ ) ಅನ್ನು ಕಾರ್ಯಗತಗೊಳಿಸುತ್ತದೆ. ಈ ಮೈತ್ರಿಯು ನೇಪಾಳದ ಜನರಿಗೆ ಅನುಕೂಲವನ್ನು ಹೆಚ್ಚಿಸಲಿದೆ. ಅಲ್ಲದೆ, ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲಿದೆ ಎಂದು NPCI ಹೇಳಿಕೆಯಲ್ಲಿ ತಿಳಿಸಿದೆ .
ನಗದು ವಹಿವಾಟುಗಳ ಡಿಜಿಟಲೀಕರಣವನ್ನು ಉತ್ತೇಜಿಸುವ ಪಾವತಿ ವೇದಿಕೆಯಾಗಿರುವ UPI ಅನ್ನು ಅಳವಡಿಸಿಕೊಳ್ಳುವ ಭಾರತದ ಹೊರಗಿನ ದೇಶ ಮೊದಲ ನೇಪಾಳವಾಗಿದೆ. ಭಾರತದಲ್ಲಿ ಡಿಜಿಟಲ್ ಪಾವತಿಗಳ ಮೇಲೆ ಯುಪಿಐ ಸೇವೆಯು ಭಾರೀ ಪರಿಣಾಮ ಬೀರಿದೆ ಎಂದು ಜಿಪಿಎಸ್ ಸಿಇಒ ರಾಜೇಶ್ ಪ್ರಸಾದ್ ಮಾನಂದರ್ ಹೇಳಿದ್ದಾರೆ. “ನೇಪಾಳದಲ್ಲಿ ಡಿಜಿಟಲ್ ಆರ್ಥಿಕತೆಯನ್ನು ಪರಿವರ್ತಿಸುವಲ್ಲಿ ಮತ್ತು ಕಡಿಮೆ ನಗದು ವ್ಯವಹಾರವನ್ನು ನಿರ್ಮಿಸುವಲ್ಲಿ ಯುಪಿಐ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಬಗ್ಗೆ ಭರವಸೆ ಹೊಂದಿದ್ದೇವೆ” ಎಂದು ಅವರು ಹೇಳಿದರು.
UPI ಡಿಜಿಟಲ್ ಪಾವತಿ ಎಂದರೇನು?
UPI ಬ್ಯಾಂಕಿಂಗ್ ವ್ಯವಸ್ಥೆಯಾಗಿದೆ. ಅದರ ಸಹಾಯದಿಂದ ಮೊಬೈಲ್ ಆ್ಯಪ್ ಮೂಲಕ ಹಣದ ವಹಿವಾಟುಗಳನ್ನು ಮಾಡಬಹುದು. UPI ಸಹಾಯದಿಂದ, ನೀವು ಎಲ್ಲಿಂದಲಾದರೂ ಯಾವುದೇ ಖಾತೆಗೆ ಹಣ ವರ್ಗಾಯಿಸಬಹುದು. ಹಣ ಪಾವತಿ ಅಷ್ಟೇ ಅಲ್ಲ, ವಿದ್ಯುತ್, ಮೊಬೈಲ್ ರಿಚಾರ್ಜ್, ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಸೇರಿದಂತೆ ಅನೇಕ ಕೆಲಸಗಳನ್ನು ಸುಲಭವಾಗಿ ಮಾಡಬಹುದಾಗಿದೆ.
ಪ್ರಸ್ತುತ BHIM, Phone Pay, Google Pay, Mobikwik, Paytm ನಂತಹ ಅನೇಕ ಅಪ್ಲಿಕೇಶನ್‌ಗಳ ಸಹಾಯದಿಂದ UPI ಅನ್ನು ಬಳಸಬಹುದಾಗಿದೆ. ಮೊಬೈಲ್‌ನಿಂದ ಯಾವುದೇ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಥವಾ UPI ಅನ್ನು ಬಳಸಲಾಗುತ್ತದೆ. ಇದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದೆ. ಇದರ ನಿಯಂತ್ರಣ ರಿಸರ್ವ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಕೈಯಲ್ಲಿ ಇರುತ್ತದೆ.