ಬೆಂಗಳೂರು: ಉಡುಪಿಯಲ್ಲಿ ಆರಂಭವಾಗಿ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡಿದ ಹಿಜಾಬ್ ನಿಷೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಲಿದೆ.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿದ್ದ ರಾಜ್ಯ ಸರ್ಕಾರದ ಫೆಬ್ರವರಿ 5ರ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಫೆಬ್ರವರಿ 25 ರಂದು ಪೂರ್ಣಗೊಳಿಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದು, ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಾಳೆ ತೀರ್ಪು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಸೇರಿದಂತೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಮತ್ತು ಶಾಲೆಗಳಿಗೆ ರಜೆ ನೀಡಲಾಗಿದೆ.
ಮುಖ್ಯ ನ್ಯಾ. ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ.ಜೆಎಂ ಖಾಜಿ ಅವರಿದ್ದ ಪೂರ್ಣ ಪೀಠ ಫೆ.10 ರಂದು ಅರ್ಜಿ ವಿಚಾರಣೆ ಪ್ರಾರಂಭಿಸಿತ್ತು. ಎರಡು ವಾರಗಳ ಕಾಲ ಸತತ ವಿಚಾರಣೆ ನಡೆದಿದೆ.
ಪರ್ದಾ ಅಥವಾ ಬುರ್ಖಾ ಕಡ್ದಾಯ ಧಾರ್ಮಿಕ ಆಚರಣೆಯಾಗದೇ ಇರಬಹುದು ಆದರೆ ಹಿಜಾಬ್ ಅಥವಾ ಹೆಡ್ ಸ್ಕಾರ್ಫ್ ಇಸ್ಲಾಮ್ ನ ಕಡ್ಡಾಯ ಭಾಗವಾಗಿದೆ. ಕೇರಳ ಹಾಗೂ ಮದ್ರಾಸ್ ಹೈಕೋರ್ಟ್ ಗಳು ಇಸ್ಲಾಮಿಕ್ ಗ್ರಂಥಗಳನ್ನು ಪರಿಶೀಲಿಸಿ ಈ ನಿರ್ಧಾರಕ್ಕೆ ಬಂದಿವೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ.
ಪ್ರತಿವಾದ ಮಂಡಿಸಿರುವ ಸರ್ಕಾರಿ ಪರ ವಕೀಲರು, ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡಿದ್ದು, ಹಿಜಾಬ್ ಕೂಡ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ ಎಂದು ಹೇಳಿದ್ದು ಸುಪ್ರೀಂ ಕೋರ್ಟ್ ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ.