ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಮೇಲೆ ಅಮೆರಿಕ ನಿರ್ಬಂಧಗಳ ಸರಣಿ ಮುಂದುವರೆದಿರುವಂತೆಯೇ ಇತ್ತ ಅಮೆರಿಕ ಮೂಲದ ಖ್ಯಾತ ಅಂತಾರಾಷ್ಟ್ರೀಯ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಸಂಚಲನಾತ್ಮಕ ನಿರ್ಣಯವೊಂದನ್ನು ತೆಗೆದುಕೊಂಡಿದೆ.
ಹೌದು.. ರಷ್ಯಾ ರಾಜಧಾನಿ ಮಾಸ್ಕೋದಿಂದ ವರದಿ ಮಾಡುತ್ತಿದ್ದ ತನ್ನ ಎಲ್ಲ ಸಿಬ್ಬಂದಿಗಳನ್ನು ನ್ಯೂಯಾರ್ಕ್ ಟೈಮ್ಸ್ ವಾಪಸ್ ಕರೆಸಿಕೊಂಡಿದ್ದು ಇಂತಹ ಬೆಳವಣಿಗೆ ಶತಮಾನದಲ್ಲೇ ಮೊದಲು ಎನ್ನಲಾಗಿದೆ.
ಮೂಲಗಳ ಪ್ರಕಾರ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬೆನ್ನಲ್ಲೇ ಯುದ್ಧದ ಕುರಿತು ಮಾಸ್ಕೋದಲ್ಲಿದ್ದ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಬಿತ್ತರಿಸುತ್ತಿದ್ದವು. ಇದು ರಷ್ಯಾ ಸರ್ಕಾರದ ಕೆಂಗಣ್ಣಿಗೆ ತುತ್ತಾಗಿತ್ತು. ಅಂತಾರಾಷ್ಟ್ರೀಯ ಮಾಧ್ಯಮಗಳು ಪೂರ್ವಗ್ರಹ ಪೀಡಿತ ವರದಿ ಪ್ರಕಟಿಸುತ್ತಿವೆ ಎಂದು ರಷ್ಯಾ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ ಯುದ್ಧದ ಯಾವುದೇ ಉಲ್ಲೇಖಗಳನ್ನು ಕಾನೂನುಬಾಹಿರಗೊಳಿಸುವ ಮೂಲಕ ಉಕ್ರೇನ್‌ನಲ್ಲಿ ಮಾಸ್ಕೋದ ಆಕ್ರಮಣದ ಕುರಿತು ವರದಿ ಮಾಡುವ ಪತ್ರಕರ್ತರನ್ನು ಅಪರಾಧೀಕರಿಸಲು ಪ್ರಯತ್ನಿಸುವ ಹೊಸ ಶಾಸನ ತರಲು ರಷ್ಯಾ ಯೋಜಿಸುತ್ತಿರುವಂತೆಯೇ ಇತ್ತ ನ್ಯೂಯಾರ್ಕ್ ಟೈಮ್ಸ್ ತನ್ನೆಲ್ಲಾ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನ್ಯೂಯಾರ್ಕ್ ಟೈಮ್ಸ್ ಮಾಸ್ಕೋ ಬ್ಯೂರೋ ಮುಖ್ಯಸ್ಥ ನೀಲ್ ಮ್ಯಾಕ್‌ಫರ್ಕ್ಹರ್ ಅವರು, ಮಾಸ್ಕೋದಲ್ಲಿ ನ್ಯೂಯಾರ್ಕ್ ಟೈಮ್ಸ್ ನ ಇತಿಹಾಸಕ್ಕಾಗಿ ಬಹಳ ದುಃಖದ ದಿನ. ಅದರ ಎಲ್ಲಾ ವರದಿಗಾರರನ್ನು ದೇಶದಿಂದ ಹೊರಗೆ ಕಳುಹಿಸಲಾಗುತ್ತಿದೆ. 1921 ರಿಂದ ವೀಸಾ ಬಿಕ್ಕಟ್ಟಿನಿಂದಾಗಿ ಒಂದು ಅಥವಾ ಎರಡು ಸಣ್ಣ ಅಡಚಣೆಗಳ ಹೊರತಾಗಿಯೂ ನಾವು ನಿರಂತರವಾಗಿ ಅಲ್ಲಿ ವರದಿಗಾರರನ್ನು ಹೊಂದಿದ್ದೇವೆ, ಸರ್ವಾಧಿಕಾರಿ ಸ್ಟಾಲಿನ್, ಶೀತಲ ಸಮರ, ಯಾವುದೂ ನಮ್ಮನ್ನು ಹೊರಹಾಕಲಿಲ್ಲ. ಆದರೆ.. ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಮಂಗಳವಾರ ಹೇಳಿಕೆಯಲ್ಲಿ ರಷ್ಯಾದಿಂದ ತನ್ನ ಔಪಚಾರಿಕ ವಾಪಸಾತಿಯನ್ನು ಘೋಷಿಸಿದೆ.