ಪುಣೆ: ಬೆಕ್ಕೊಂದು ಮಾಡಿದ ಸಣ್ಣ ಎಡವಟ್ಟಿಗೆ ತಾನು ಪ್ರಾಣ ಕಳೆದುಕೊಂಡಿದ್ದಲ್ಲದೆ, ಅಂದಾಜು 100 ಕೋಟಿ ರೂಪಾಯಿ ನಷ್ಟವಾಗಿರುವ ವಿಚಿತ್ರ ಪ್ರಸಂಗ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಬೆಕ್ಕು ಮಾಡಿದ ಕೆಲಸಕ್ಕೆ 60 ಸಾವಿರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮತ್ತು 7 ಸಾವಿರ ವ್ಯಾಪಾರಿಗಳಿಗೆ ವಿದ್ಯುತ್ ಕಡಿತ ಪರಿಣಾಮ ಬೀರಿದ್ದು, ಇದರಿಂದ ಅಂದಾಜು 100 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಭೋಶರಿಯಲ್ಲಿ ಮಹಾರಾಷ್ಟ್ರ ವಿದ್ಯುತ್ ಪ್ರಸರಣ ನಿಗಮಕ್ಕೆ ಸೇರಿದ ಹೈವೋಲ್ಟೇಜ್ 220 ಕೆವಿ ಸಬ್ ಸ್ಟೇಷನ್ ಇದೆ. ಎರಡು 100 MVA ಸಾಮರ್ಥ್ಯ ಮತ್ತು ಒಂದು 75 MVA ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳಿವೆ. ಆದಾಗ್ಯೂ 100 MVA ವಿದ್ಯುತ್ ಪರಿವರ್ತಕವನ್ನು ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಳಿಸಲಾಗಿದೆ. ಇನ್ನೆರಡು ಟ್ರಾನ್ಸ್‌ಫಾರ್ಮರ್‌ಗಳು ಎಂಎಸ್‌ಇಡಿಸಿಎಲ್ ಅಡಿಯಲ್ಲಿ ಒಟ್ಟು 26 ವಿದ್ಯುತ್ ಲೈನ್‌ಗಳಿಗೆ ವಿದ್ಯುತ್ ಪೂರೈಸುತ್ತವೆ. ಆದರೆ, ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ 100 ಎಂವಿಎ ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ಕಾಣಿಸಿಕೊಂಡಿದೆ. ಬೆಕ್ಕು ಟ್ರಾನ್ಸ್‌ಫಾರ್ಮರ್‌ಗೆ ಹತ್ತಿದಾಗ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಬೆಕ್ಕು ಕೂಡ ಸತ್ತಿದೆ. ಟ್ರಾನ್ಸಫಾರ್ಮರ್ ಸುಟ್ಟು ಕರಕಲಾಗಿದೆ. 10 ವಿದ್ಯುತ್ ತಂತಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶದೊಂದಿಗೆ ಭೋಶರಿ, ಅಕುರ್ಡಿ ಪ್ರದೇಶದ ಸುಮಾರು 60,000 ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಅಂತಿಮವಾಗಿ ಆರು ತಾಸುಗಳ ಪರಿಶ್ರಮದ ನಂತರ ಭೋಶರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.
ಇನ್ನು ವಿದ್ಯುತ್ ಪೂರೈಕೆ ಮರು ಸ್ಥಾಪಿಸಿದ್ದರೂ ಸದ್ಯಕ್ಕೆ ಸಂಪೂರ್ಣ ಲೋಡ್ ಒಂದು ಟ್ರಾನ್ಸ್‌ಫಾರ್ಮರ್ ಮೇಲೆಯೇ ಇದೆ. ಇದು 75 MVA ಸಾಮರ್ಥ್ಯವನ್ನು ಸಹ ಹೊಂದಿದೆ. ಇನ್ನೂ 100 ಕೆವಿಎ ಟ್ರಾನ್ಸ್‌ಫಾರ್ಮರ್ ಇಲ್ಲದಿದ್ದರೆ ಪರಿಸ್ಥಿತಿಯು ಸುಧಾರಿಸುವುದಿಲ್ಲ. ಆದ್ದರಿಂದ ಭೋಶರಿ ಎಂಐಡಿಸಿ ಎಸ್ ಬ್ಲಾಕ್, ಟೀ ಬ್ಲಾಕ್, ಭೋಶರಿ ಎಂಐಡಿಸಿ ಆವರಣ ಹಾಗೂ ನೆಹರು ನಗರ, ಯಶವಂತನಗರ, ಶಾಂತಿನಗರ, ಭೋಶರಿ ಗೌತಮ್, ಇಂದ್ರಾಯಣಿ ನಗರ, ಚಕ್ರಪಾಣಿ ವಸಾಹತ್, ಶಾಸ್ತ್ರಿ ಚೌಕ್‌ನಲ್ಲಿ 7 ಸಾವಿರ ಕೈಗಾರಿಕೆ ಮತ್ತು ವ್ಯಾಪಾರ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯುತ್ ಕೊರತೆಯಿಂದ 100 ಕೋಟಿ ರೂ.ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
ಕ್ಷೇತ್ರದ ಗುಡಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸಂದೀಪ ಬೆಲ್ ಸಾರೆ ವಿದ್ಯುತ್ ಸಮಸ್ಯೆ ಕುರಿತು ಮಾತನಾಡಿ, ಕೂಡಲೇ ವಿದ್ಯುತ್ ಸಚಿವರು ಸ್ಪಂದಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಇನ್ನೂ ಮೂರು ದಿನಗಳ ಕಾಲ ವಿದ್ಯುತ್ ಸಮಸ್ಯೆ ಬಗೆಹರಿಯುವ ಯಾವುದೇ ಅವಕಾಶವನ್ನು ಸದ್ಯಕ್ಕಿಲ್ಲ. ಮತ್ತೊಂದೆಡೆ ಅಧಿಕಾರಿಗಳು ವಿದ್ಯುತ್ ಮಿತವಾಗಿ ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದು, ಸಂಪೂರ್ಣ ಹೊರೆ ಸಿಂಗಲ್ ಟ್ರಾನ್ಸ್ ಫಾರ್ಮರ್ ಮೇಲೆ ಬೀಳುತ್ತಿದೆ. ಅಲ್ಲಿ ಎರಡನೇ ಪರಿವರ್ತಕ ಸ್ಥಾಪಿಸಲು ಶನಿವಾರದವರೆಗೆ ಬೇಕಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ಬೆಕ್ಕು ಮಾಡಿದ ಎಡವಟ್ಟಿನಿಂದಾಗಿ ಭೋಶರಿ ಪ್ರದೇಶದಲ್ಲಿ ಸಿಕ್ಕಾಪಟ್ಟೆ ತೊಂದರೆಯಾಗಿದೆ.