ಚಂಡೀಗಢ: ಪಂಜಾಬ್ ನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರ ಪೈಕಿ 11 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದು 9 ಮಂದಿ ಕರೋಡ್ ಪತಿಗಳಿದ್ದಾರೆ.
ನಾಲ್ವರ ವಿರುದ್ಧ ಗಂಭೀರ ಆರೋಪಗಳಿದೆ ಎಂದು ಚುನಾವಣಾ ಹಕ್ಕುಗಳ ಗುಂಪು ಎಡಿಆರ್ ಹೇಳಿದೆ. 11 ಸಚಿವರ ಪೈಕಿ ಸ್ವತಃ ಸಿಎಂ ಭಗವಂತ್ ಮಾನ್ ಇದ್ದಾರೆ ಎಂದು ಪಂಜಾಬ್ ಚುನಾವಣೆ ನಿಗಾ ಹಾಗೂ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಮಾಹಿತಿ ಬಹಿರಂಗಪಡಿಸಿದೆ.
ಎಡಿಆರ್ ಪ್ರಕಾರ 7 ಸಚಿವರು (ಶೇ.64 ರಷ್ಟು) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇರುವುದನ್ನು ಘೋಷಿಸಿಕೊಂಡಿದ್ದಾರೆ.
11 ಮಂದಿಯ ಪೈಕಿ ನಾಲ್ವರು (ಶೇ.36 ರಷ್ಟು ಮಂದಿ) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. 11 ಸಚಿವರ ಪೈಕಿ 9 ಮಂದಿ ಕರೋಡ್ ಪತಿಗಳಾಗಿದ್ದು ಅವರ ಸರಾಸರಿ ಆಸ್ತಿ 2.87 ಕೋಟಿ ರೂಪಾಯಿಗಳಾಗಿವೆ.
ಹೋಶಿಯಾಪುರದ ಬರ್ಮ್ ಶಂಕೆರ್ (ಜಿಂಪಾ) ಅತಿ ಹೆಚ್ಚು ಸಂಪತ್ತನ್ನು ಘೋಷಿಸಿಕೊಂಡಿರುವ ಶ್ರೀಮಂತ ಸಚಿವನಾಗಿದ್ದು, 8.56 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಭೋವಾ ಕ್ಷೇತ್ರದ ಲಾಲ್ ಚಂದ್ (ಎಸ್ ಸಿ) ಕ್ಷೇತ್ರ ಅತ್ಯಂತ ಕಡಿಮೆ ಆಸ್ತಿ ಹೊಂದಿರುವ (6.19 ಲಕ್ಷ ರೂಪಾಯಿ ಮೌಲ್ಯದ ಆಸ್ತಿ) ವರಾಗಿದ್ದಾರೆ. 9 ಸಚಿವರು ಬಾಧ್ಯತೆಗಳನ್ನು ಹೊಂದಿದ್ದಾರೆ. 1.08 ಕೋಟಿ ರೂಪಾಯಿ ಮೌಲ್ಯದ ಸಾಲ ಹೊಂದುವ ಮೂಲಕ ಅತಿ ಹೆಚ್ಚು ಬಾಧ್ಯತೆಗಳನ್ನು ಹೊಂದಿರುವ ಸಚಿವರಾಗಿದ್ದಾರೆ ಬರ್ಮ್ ಶಂಕೆರ್.
ಐವರು ಸಚಿವರ ವಿದ್ಯಾರ್ಹತೆ (ಶೇ.45 ರಷ್ಟು) 10-12 ನೇ ತರಗತಿಯಾಗಿದ್ದು, ಉಳಿದವರು ಪದವಿ ಅಥವಾ ಅದಕ್ಕಿಂತಲೂ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದಾರೆ. ಸಂಪುಟದಲ್ಲಿರುವ ಶೇ.55 ರಷ್ಟು ಮಂದಿ 31-50 ವರ್ಷದವರಾಗಿದ್ದು, ಶೇ.45 ರಷ್ಟು ಮಂದಿ 51-60 ವರ್ಷಗಳವರಾಗಿದ್ದಾರೆ. 10 ಮಂದಿ ಆಮ್ ಆದ್ಮಿ ಶಾಸಕರು ಪಂಜಾಬ್ ಸಚಿವರಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು.