ನವದೆಹಲಿ: ₹226 ಕೋಟಿಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಅತಿ ಶ್ರೀಮಂತ ವ್ಯಕ್ತಿಗಳ ಸಂಖ್ಯೆಯು 2021ರಲ್ಲಿ ಭಾರತದಲ್ಲಿ ಶೇಕಡ 11ರಷ್ಟು ಹೆಚ್ಚಳ ಕಂಡಿದೆ ಎಂದು ನೈಟ್ ಫ್ರ್ಯಾಂಕ್ ವರದಿ ಹೇಳಿದೆ. ಷೇರು ಮಾರುಕಟ್ಟೆಗಳು ಕಂಡ ಭಾರಿ ಪ್ರಮಾಣದ ಏರಿಕೆ, ಡಿಜಿಟಲ್ ಕ್ರಾಂತಿ ಈ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ವರದಿ ಹೇಳಿದೆ.
ಜಾಗತಿಕವಾಗಿ ಬಿಲಿಯನೇರ್‌ಗಳು (₹ 7,570 ಕೋಟಿಗಿಂತ ಹೆಚ್ಚು ಸಂಪತ್ತು ಹೊಂದಿರುವವರು) ಹೆಚ್ಚು ಇರುವ ದೇಶಗಳ ಪಟ್ಟಿಯಲ್ಲಿ ಭಾರತವು ಮೂರನೆಯ ಸ್ಥಾನದಲ್ಲಿ ಇದೆ. ಅಮೆರಿಕ (748 ಮಂದಿ ಬಿಲಿಯನೇರ್‌ಗಳು) ಮತ್ತು ಚೀನಾ (554) ಮೊದಲ ಎರಡು ಸ್ಥಾನಗಳಲ್ಲಿ ಇವೆ. ಭಾರತದಲ್ಲಿ 145 ಮಂದಿ ಬಿಲಿಯನೇರ್‌ಗಳು ಇದ್ದಾರೆ.
₹226 ಕೋಟಿಗಿಂತ ಹೆಚ್ಚು ಮೌಲ್ಯದ ಸಂಪತ್ತು ಹೊಂದಿರುವ ಅತಿ ಶ್ರೀಮಂತರ ಸಂಖ್ಯೆಯು 2021ರಲ್ಲಿ ಜಾಗತಿಕ ಮಟ್ಟದಲ್ಲಿ ಶೇ 9.3ರಷ್ಟು ಏರಿಕೆ ಕಂಡಿದೆ. ಭಾರತದಲ್ಲಿ ಇಷ್ಟು ಸಂಪತ್ತು ಹೊಂದಿರುವ ವ್ಯಕ್ತಿಗಳ ಸಂಖ್ಯೆ ಈಗ 13,637. 2020ರಲ್ಲಿ ಇಂಥವರ ಸಂಖ್ಯೆ 12,287 ಆಗಿತ್ತು.
ದೇಶದ ವಿವಿಧ ನಗರಗಳ ಪೈಕಿ ಇಂಥವರ ಸಂಖ್ಯೆ ಅತಿಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಬೆಂಗಳೂರಿನಲ್ಲಿ. ಇಲ್ಲಿ 2021ರಲ್ಲಿ ಇಂಥವರ ಪ್ರಮಾಣವು ಶೇ 17.1ರಷ್ಟು ಏರಿಕೆ ಕಂಡು 352ಕ್ಕೆ ತಲುಪಿದೆ.
ಅತಿಶ್ರೀಮಂತ ವ್ಯಕ್ತಿಗಳ ಸಂಖ್ಯೆಯು 2026ಕ್ಕೆ ಮೊದಲು ಶೇ 39ರ ಪ್ರಮಾಣದಲ್ಲಿ ಏರಿಕೆ ಕಂಡು, 19,006ಕ್ಕೆ ತಲುಪಲಿದೆ. 'ಅತಿಶ್ರೀಮಂತರ ಸಂಖ್ಯೆಯು ಹೆಚ್ಚಳ ಆಗಿರುವುದಕ್ಕೆ ಮುಖ್ಯ ಕಾರಣ ಷೇರು ಮಾರುಕಟ್ಟೆಗಳಲ್ಲಿ ಕಂಡುಬಂದ ಏರಿಕೆ ಹಾಗೂ ಡಿಜಿಟಲ್ ಜಗತ್ತಿನಲ್ಲಿ ಆಗಿರುವ ಕ್ರಾಂತಿ. ದೇಶದ ಯುವಕರು, ಸ್ವಸಾಮರ್ಥ್ಯದಿಂದ ಮೇಲೆ ಬಂದವರು ಈ ಮಟ್ಟದಲ್ಲಿ ಸಂಪತ್ತು ಹೊಂದುತ್ತಿರುವುದು ಅಸಾಮಾನ್ಯವಾದುದು' ಎಂದು ನೈಟ್ ಫ್ರ್ಯಾಂಕ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಿಶಿರ್ ಬೈಜಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ಅತಿಶ್ರೀಮಂತರ ಪ್ರಮಾಣವು ಶೇ 89ರಷ್ಟು ಹೆಚ್ಚಳ ಆಗಲಿದ್ದು, ಇಂಥವರ ಸಂಖ್ಯೆಯು 2026ರ ವೇಳೆಗೆ 665ಕ್ಕೆ ತಲುಪಲಿದೆ.