ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆ.ಜ.ಉಪೇಂದ್ರ ದ್ವಿವೇದಿ ಅವರು ಅಧಿಕಾರಿಗಳು,ಜ್ಯೂನಿಯರ್ ಕಮಿಷನ್ಡ್ ಅಧಿಕಾರಿಗಳು ಮತ್ತ ಇತರ ಹುದ್ದೆಗಳ ಸಿಬ್ಬಂದಿಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು.
ಅತ್ಯಂತ ಪ್ರತಿಕೂಲ ಸಂದರ್ಭಗಳಲ್ಲಿ ಅಸಾಧಾರಣ ಧೈರ್ಯದ ಪ್ರದರ್ಶನಕ್ಕಾಗಿ 92 ಶೌರ್ಯ ಪ್ರಶಸ್ತಿಗಳು ಮತ್ತು ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆಗಾಗಿ 25 ವಿಶಿಷ್ಟ ಸೇವಾ ಪ್ರಶಸ್ತಿಗಳನ್ನು ನೀಡಲಾಯಿತು ಎಂದು ರಕ್ಷಣಾ ವಕ್ತಾರರು ತಿಳಿಸಿದರು. ಈ ಪೈಕಿ 19 ಪ್ರಶಸ್ತಿಗಳನ್ನು ಹೋರಾಟದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಯೋಧರ ಬಂಧುಗಳಿಗೆ ಮರಣೋತ್ತರವಾಗಿ ಪ್ರದಾನಿಸಲಾಯಿತು.
ಕಾಶ್ಮೀರ ಕಣಿವೆಯಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆ ಸಂದರ್ಭದಲ್ಲಿ ಸಿಕ್ಕಿಕೊಂಡಿದ್ದ 12 ನಾಗರಿಕರನ್ನು ರಕ್ಷಿಸಿದ್ದ ಮತ್ತು ಓರ್ವ ಭಯೋತ್ಪಾದಕನನ್ನು ಕೊಂದಿದ್ದ 44 ರಾಷ್ಟ್ರೀಯ ರೈಫಲ್ಸ್ (ರಾಜಪೂತ್)ನ ಮೇ.ಮಯಾಂಕ್ ವಿಷ್ಣೋಯಿ ಹಾಗೂ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ 'ಹಿಮ ಚಿರತೆ 'ಕಾರ್ಯಾಚರಣೆ ಸಂದರ್ಭದಲ್ಲಿ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ್ದ ಸಿಪಾಯಿ ಚಂದನ್ ಕುಮಾರ್ (16 ಬಿಹಾರ) ಮರಣೋತ್ತರ ಪ್ರಶಸ್ತಿಗಳಿಗೆ ಪಾತ್ರರಾದವರಲ್ಲಿ ಸೇರಿದ್ದಾರೆ.
ನಿಯಂತ್ರಣ ರೇಖೆಯಲ್ಲಿ ಗಡಿಯಾಚೆಯಿಂದ ಕದನ ವಿರಾಮ ಉಲ್ಲಂಘನೆಗಳ ವಿರುದ್ಧ ಹೋರಾಡುತ್ತ ಹುತಾತ್ಮರಾದ ಸುಬೇದಾರ್ ಸುಖದೇವ್ ಸಿಂಗ್, ಹವಾಲ್ದಾರ್ ಗೋಕರ್ಣ ಸಿಂಗ್, ಹವಾಲ್ದಾರ್ ಹರ್ಧನ್ ಚಂದ್ರ ರಾಯ್, ನಾಯಬ್ ಸುಬೇದಾರ್ ರವೀಂದರ್, ನಾಯಕ್ ಗುರುಚರಣ್ ಸಿಂಗ್, ಗನ್ನರ್ ಭೂಪೇಂದರ್ ಮತ್ತು ಸಿಪಾಯಿ ರೋಹಿನ್ ಕುಮಾರ್ ಅವರಿಗೆ ಮರಣೋತ್ತರವಾಗಿ ಸೇನಾ ಪದಕಗಳನ್ನು ನೀಡಲಾಗಿದೆ. ನಿಯಂತ್ರಣ ರೇಖೆಯಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಹಲವಾರು ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಹತ್ಯೆಗೈದಿದ್ದ ಮೂವರು ಪ್ಯಾರಾಟ್ರೂಪರ್ಗಳಾದ ಬಾಲಕೃಷ್ಣ, ಛತ್ರಪಾಲ್ ಸಿಂಗ್ ಮತ್ತು ಅಮಿತ ಕುಮಾರ ಅವರೂ ಮರಣೋತ್ತರವಾಗಿ ಸೇನಾ ಪದಕಗಳನ್ನು ಪಡೆದವರಲ್ಲಿ ಸೇರಿದ್ದಾರೆ.
ನಾಯಬ್ ಸುಬೇದಾರ್ ರಜ್ವಿಂದರ್ ಸಿಂಗ್,ನಾಯಕ್ ರಾಜೇಶ್ ಕುಮಾರ್, ಸಿಪಾಯಿ ಪ್ರಶಾಂತ್ ಶರ್ಮಾ, ಲಾನ್ಸ್ ನಾಯಕ್ ದಿನೇಶ ಸಿಂಗ್ ಮತ್ತು ರಾಜ್ ಸಿಂಗ್, ಜಲಜೀತ್ ಯಾದವ್, ರಾಹುಲ್ ರೈನ್ಸ್‌ವಾಲ್ ಅವರೂ ಮರಣೋತ್ತರ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಬ್ರಿಗೇಡಿಯರ್ ಅಮರದೀಪ ಸಿಂಗ್ ಔಜಿಲಾ,ಕರ್ನಲ್‌ಗಳಾದ ಪ್ರದೀಪ್ ಸಿಂಗ್ ಸಾನ್ ಮತ್ತು ಪುಣ್ಯಬಾಚಿ ಮೊಹಂತಿ ಅವರು ಪದಕಗಳಿಗೆ ಭಾಜನರಾಗಿದ್ದಾರೆ.
11 ಬ್ರಿಗೇಡಿಯರ್‌ಗಳು,19 ಕರ್ನಲ್ ಗಳು ಮತ್ತು ಲೆ.ಕರ್ನಲ್ ಗಳು ಹಾಗೂ 23 ಮೇಜರ್ ಗಳು, ಕ್ಯಾಪ್ಟನ್‌ಗಳು ಮತ್ತು ಲೆಫ್ಟಿನಂಟ್‌ಗಳೂ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.