ಉಕ್ರೇನ್: ಉಕ್ರೇನ್ ನ ಝಪೊರಿಜಿಯಾ ಪ್ರದೇಶದ 11 ವರ್ಷದ ಬಾಲಕ ಯುದ್ಧ ಭೂಮಿಯಲ್ಲಿ ಏಕಾಂಗಿಯಾಗಿ ಸಾವಿರ ಕಿಲೋ ಮೀಟರ್ ಪ್ರಯಾಣಿಸಿದ್ದಾನೆ. ಈ ಹುಡುಗನನ್ನು ಉಕ್ರೇನ್ ವಿದೇಶಾಂಗ ಸಚಿವರು '' ದಿ ಬಿಗ್ಗೆಸ್ಟ್ ಹೀರೋ ಆಫ್ ಲಾಸ್ಟ್ ನೈಟ್ '' ಎಂದು ಬಣ್ಣಿಸಿದ್ದಾರೆ.
ಒಂದು ಫೋಲ್ಡರ್ ಬ್ಯಾಗ್ ನಲ್ಲಿ ಟೆಲಿಫೋನ್ ನಂಬರ್, ಪಾಸ್ ಪೋರ್ಟ್ ಮತ್ತು ತಿನ್ನಲು ಆಹಾರವಿರುವ ಪೇಪರ್ ಬ್ಯಾಗ್ ನ್ನು ಹುಡುಗನ ಹೆಗಲ ಮೇಲೆ ಹಾಕಿ ಇನ್ನು ಹೊರಡು ಎಂದು ಆ ಬಾಲಕನ ತಾಯಿ ಕೇಳಿ ಕಳಿಸಿದರೆಂದು ಬಾಲಕ ಹೇಳಿದ್ದಾನೆ. ನಂತರ ಧೈರ್ಯ ಮಾಡಿ ರೈಲು ಹತ್ತಿ ಗಡಿ ತಲುಪಿದ ಬಾಲಕ ಸದ್ಯ ಜನಸಾಮಾನ್ಯರಿಗೆ ಹೀರೋ ಆಗಿದ್ದಾನೆ.
ರೈಲು ಪ್ರಯಾಣದ ನಂತರ ಸ್ಲೋವಾಕಿಯಾದಲ್ಲಿರುವ ಸಂಬಂಧಿಕರನ್ನು ತಲುಪಿದ್ದಾನೆ. ಹುಡುಗ ತನ್ನ ನಗುವಿನೊಂದಿಗೆ ಗಡಿ ಕಾಯುವ ಗಾರ್ಡ್ ಗಳ ಹೃದಯವನ್ನು ಗೆದ್ದಿದ್ದಾನೆ. ಬಾಲಕನ ನಗು, ನಿರ್ಭಯತೆ ಮತ್ತು ಸಮರ್ಪಣೆ ಎಲ್ಲವೂ ನಿಜವಾದ ನಾಯಕನ ಗುಣಗಳು ಎಂದು ಉಕ್ರೇನಿಯನ್ ಗೃಹ ಸಚಿವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಡಿ ಕಾವಲುಗಾರರು ಬಾಲಕನ ಬಳಿ ಇದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಬ್ರಾಟಿಸಾಲ್ವಾದಿಂದ ಬಂದ ಸಂಬಂಧಿಕರಿಗೆ ಬಾಲಕನನ್ನು ಹಸ್ತಾಂತರಿಸಿದ್ದಾರೆ. ಈ ವಿಚಾರ ತಿಳಿದ ಬಾಲಕನ ತಾಯಿ ಸ್ಲೋವಾಕ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಹುಡುಗನ ಪೋಷಕರು ಉಕ್ರೇನ್ ನಲ್ಲಿಯೇ ಇದ್ದರೂ ಹೊರಗೆ ಬಾರದ ಪರಿಸ್ಥಿತಿ, ಉಕ್ರೇನ್ ರಷ್ಯಾ ಯುದ್ಧದ ಸಂದರ್ಭದಲ್ಲಿ ತಮ್ಮ ಪ್ರಾಣ ಉಳಿಯುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ, ತಮ್ಮ ಕನಸಿನ ವಾರಸುದಾರನಾದರೂ ಸುರಕ್ಷಿತವಾಗಿರಲಿ ಎಂದು ಭಾವಿಸಿ ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾರೆ.