ನವದೆಹಲಿ: ದೇಶದಲ್ಲಿ 12 ರಿಂದ 14 ವರ್ಷದೊಳಗಿನ ಸುಮಾರು 1 ಕೋಟಿ ಮಕ್ಕಳಿಗೆ ಕೋವಿಡ್-19 ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ತಿಳಿಸಿದ್ದಾರೆ.
ಮಾರ್ಚ್ 16 ರಿಂದ ಈ ಗುಂಪಿನ ಮಕ್ಕಳಿಗೆ ಕೊರ್ಬೆವ್ಯಾಕ್ಸ್ ಲಸಿಕೆ ನೀಡಲಾಗುತ್ತಿದೆ. ಮೊದಲ ಡೋಸ್ ನೀಡಿದ 28 ದಿನಗಳ ನಂತರ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ. ಕಳೆದ ವರ್ಷ ಮಾರ್ಚ್ 1 ರ ಹೊತ್ತಿಗೆ, ದೇಶದಲ್ಲಿ 12 ಮತ್ತು 13 ವರ್ಷ ವಯಸ್ಸಿನ 4.7 ಕೋಟಿ ಮಕ್ಕಳಿದ್ದರು.
12-14 ವರ್ಷ ನಡುವಿನ ಸುಮಾರು 1 ಕೋಟಿ ಮಕ್ಕಳಿಗೆ ಕೋವಿಡ್-19 ಮೊದಲ ಡೋಸ್ ನೀಡಲಾಗಿದೆ. ಲಸಿಕೆ ಪಡೆದ ಎಲ್ಲಾ ನನ್ನ ಹದಿಹರೆಯದ ವಾರಿಯರ್ಸ್ ಗಳಿಗೆ ಅಭಿನಂದನೆಗಳು, ಈ ವೇಗವನ್ನು ಮುಂದುವರೆಸೋಣ ಎಂದು ಮಾಂಡವೀಯಾ ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಬೆಳಗ್ಗೆ 7 ಗಂಟೆಯವರೆಗಿನ ತಾತ್ಕಾಲಿಕ ವರದಿಗಳ ಪ್ರಕಾರ, ದೇಶದಲ್ಲಿ ನೀಡಲಾದ ಒಟ್ಟು ಕೋವಿಡ್ -19 ಲಸಿಕೆ ಪ್ರಮಾಣ 182.55 ಕೋಟಿ ಮೀರಿದೆ.