ನವದೆಹಲಿ: ಮಾ.16 ರಿಂದ ಪ್ರಾರಂಭವಾಗಲಿರುವ 12-14 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಈ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಕೋರ್ಬೆವ್ಯಾಕ್ಸ್ ಲಸಿಕೆಯನ್ನು ಮಾತ್ರ ಬಳಕೆ ಮಾಡಬೇಕೆಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಬಯಾಲಜಿಕಲ್ ಇ' ಸಂಸ್ಥೆಯ ಇಂಟ್ರಾಮಸ್ಕ್ಯೂಲರ್ ಲಸಿಕೆ ಕೋರ್ಬೆವ್ಯಾಕ್ಸ್ ನ ಎರಡು ಡೋಸ್ ಗಳನ್ನು 28 ದಿನಗಳ ಅಂತರದಲ್ಲಿ ಮಕ್ಕಳಿಗೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದ್ದು, ರಾಜ್ಯಗಳೊಂದಿಗೆ ಮಾರ್ಗಸೂಚಿಯನ್ನು ಹಂಚಿಕೊಳ್ಳಲಾಗಿದೆ.
14-15 ವರ್ಷದ ಮಕ್ಕಳಿಗೆ ಈಗಾಗಲೇ 15-18 ವರ್ಷದವರಿಗೆ ಲಸಿಕೆ ಅಭಿಯಾನದಲ್ಲೇ ನೀಡಲಾಗಿದೆ. ಮಾರ್ಗಸೂಚಿಗಳ ಪ್ರಕಾರ ಮಾ.1, 2021 ರ ಪ್ರಕಾರ, 12-13 ವರ್ಷಗಳ ವಯಸ್ಸಿನ 4.7 ಕೋಟಿ ಮಕ್ಕಳು ದೇಶಾದ್ಯಂತ ಇದ್ದಾರೆ.
60 ವರ್ಷಗಳ ಮೇಲ್ಪಟ್ಟ ಎಲ್ಲಾ ಮಂದಿಗೂ ಈಗ ಮುನ್ನೆಚ್ಚರಿಕಾ ಕ್ರಮ ಡೋಸ್ ಲಸಿಕೆಯನ್ನು ನೀಡಲಾಗುತ್ತದೆ. ಈ ಡೋಸ್ ನೀಡುವುದಕ್ಕೆ ಎರಡನೇ ಡೋಸ್ ನೀಡಿದಾಗಿನಿಂದ 39 ವಾರಗಳು ಕಳೆದಿರುವುದೇ ಮಾನದಂಡವಾಗಿರಲಿದೆ ಎಂದು ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.