ನವದೆಹಲಿ: ದೇಶದಾದ್ಯಂತ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ 12-14 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್ ಕೋವಿಡ್ ಲಸಿಕೆ ಉಚಿತ ವಿತರಣೆ ಅಭಿಯಾನ ಬುಧವಾರದಿಂದ ಆರಂಭವಾಗಲಿದೆ. ಅಲ್ಲದೆ, 60 ಮೇಲ್ಪಟ್ಟ ಎಲ್ಲಾ ವೃದ್ಧರಿಗೂ ಬೂಸ್ಟರ್ ಡೋಸ್ ಕೂಡ ಸಿಗಲಿದೆ.
ವಿವಿಧ ವಯೋವರ್ಗಕ್ಕೆ ಬೇರೆ ಬೇರೆ ಲಸಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ ವೇಳೆ ಯಾವುದೇ ಗೊಂದಲಗಳು ಸೃಷ್ಟಿಯಾಗುವುದನ್ನು ತಪ್ಪಿಸಲು 12-14ರ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಲು ಪ್ರತ್ಯೇಕ ಸ್ಥಳಗಳ ನಿಗದಿ ಮಾಡಿ ಮತ್ತು ಲಸಿಕಾಕರಣದಲ್ಲಿ ಭಾಗಿಯಾಗುವ ಸಿಬ್ಬಂದಿಗಳಿಗೆ ತರಬೇತಿ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದ್ದು, ಇದಕ್ಕಾಗಿ ರಾಜ್ಯ ಸರ್ಕಾರಗಳು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿವೆ.
2010ರ ಮಾ.15 ಹಾಗೂ ಅದಕ್ಕೂ ಮೊದಲು ಜನಿಸಿದ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಪ್ರತಿಯೊಬ್ಬ ಫಲಾನುಭವಿಗೂ ಎರಡು ಡೋಸ್ ‘ಕೊರ್ಬೆವ್ಯಾಕ್ಸ್’ ಲಸಿಕೆ ನೀಡಲಾಗುವುದು. ಮೊದಲ ಡೋಸ್ ಪಡೆದ 28 ದಿನಗಳ ನಂತರ ಎರಡನೆ ಡೋಸ್ ಲಸಿಕೆ ನೀಡಲಾಗುವುದು.
ಮಕ್ಕಳಿಗೆ ನೀಡಲು ರಾಜ್ಯದಲ್ಲಿ ಲಸಿಕೆಯ ದಾಸ್ತಾನು ಇದೆ. ಪ್ರಾರಂಭದಲ್ಲಿ ಲಸಿಕಾ ಅಭಿಯಾನಗಳನ್ನು ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುವುದು. ನಂತರ ಶಾಲೆಗಳಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮೇಲ್ವಿಚಾರಣೆ ಬಳಿಕ ಲಸಿಕ ನೀಡಲಾಗುವುದು. ಲಸಿಕೆ ಪಡೆದ ಮಕ್ಕಳ ಲಸಿಕಾ ಪ್ರಮಾಣ ಪತ್ರ ಕೋವಿನ್ ಪೋರ್ಟಲ್‌ನಲ್ಲಿ ಲಭ್ಯವಾಗುತ್ತವೆ. ಆನ್‌ಲೈನ್ ತರಗತಿಗಳು ನಡೆಯುವ ಶಾಲೆಗಳಲ್ಲಿ ದಿನಾಂಕ ನಿಗದಿಪಡಿಸಿ, ಮಕ್ಕಳಿಗೆ ಲಸಿಕೆ ಪಡೆಯಲು ಬರಹೇಳಬೇಕು. ಶಾಲೆಯಿಂದ ಹೊರಗುಳಿದ ಅಥವಾ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ, ಕಾರ್ಮಿಕ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಬೆಂಬಲದೊಂದಿಗೆ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಅಭಿಯಾನ ನಡೆಸಬೇಕು ಎಂದು ಪ್ರಕಟಣೆ ತಿಳಿಸಿದೆ.