12 ರಿಂದ 17 ವರ್ಷದ ಮಕ್ಕಳಿಗೆ ಅಮೆರಿಕ ಮೂಲದ ಕಂಪನಿ ನೋವಾವ್ಯಾಕ್ಸ್ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಕರು (ಡಿಸಿಜಿಐ) ಅನುಮತಿ ನೀಡಿದೆ ಎಂದು ಕಂಪನಿ ತಿಳಿಸಿದೆ.
ಈ ವಯೋಮಾನದವರಿಗೆ ಲಸಿಕೆಯ ತುರ್ತು ಬಳಕೆಗೆ ಜಾಗತಿಕವಾಗಿ ಮೊದಲ ಬಾರಿಗೆ ಅನುಮೋದನೆ ಪಡೆದುಕೊಂಡಿದೆ.
12 ರಿಂದ 17 ವರ್ಷದ 2,247 ಜನರನ್ನು ಲಸಿಕೆ ಟ್ರಯಲ್‌ಗೆ ಬಳಸಿಕೊಳ್ಳಲಾಗಿದ್ದು, ಈ ಪ್ರಯೋಗದಲ್ಲಿ ಈ ಲಸಿಕೆಯು ಕೋವಿಡ್-19 ವಿರುದ್ಧ ಶೇ 80ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಳೆದ ತಿಂಗಳು ನೋವಾವ್ಯಾಕ್ಸ್ ತಿಳಿಸಿತ್ತು.
460 ಭಾರತೀಯ ಮಕ್ಕಳನ್ನು ಒಳಗೊಂಡಿದ್ದ ಕೊನೆಯ ಹಂತದ ಅಧ್ಯಯನದಲ್ಲಿ ಕೂಡ ಅದೇ ವಯಸ್ಸಿನ ಮಕ್ಕಳಲ್ಲಿ ನೋವಾವ್ಯಾಕ್ಸ್ ಲಸಿಕೆಯು ಪ್ರತಿರಕ್ಷಣೆ ಪ್ರತಿಕ್ರಿಯೆ ಉಂಟು ಮಾಡಿದೆ ಎಂದು ಕಂಪನಿಯು ಮಂಗಳವಾರ ಹೇಳಿದೆ.
12 ರಿಂದ 17 ವರ್ಷದ ವಯೋಮಾನದವರಿಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದುಕೊಂಡಿರುವ ಕೋವಿಡ್-19 ವಿರುದ್ಧದ ನಾಲ್ಕನೇ ಲಸಿಕೆ ಇದಾಗಿದೆ. ಈ ಮೊದಲು ಕಾರ್ಬೆವ್ಯಾಕ್ಸ್, ಝೈಕೋವ್-ಡಿ ಮತ್ತು ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಈಗಾಗಲೇ ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದುಕೊಂಡಿವೆ.
'ಕೋವಿಡ್ ವಿರುದ್ಧ ನೋವಾವ್ಯಾಕ್ಸ್‌ನ ಲಸಿಕೆ ಶೇ 80ರಷ್ಟು ಪರಿಣಾಮ ಹೊಂದಿದೆ ಎಂಬುದು ಸಾಬೀತಾಗಿದೆ. ಭಾರತದಲ್ಲಿಯೂ ಲಸಿಕೆಯ ಟ್ರಯಲ್‌ಗೆ ಅರ್ಜಿ ಸಲ್ಲಿಸಿದ್ದೇವೆ' ಸೀರಂ ಇನ್‌ಸ್ಟಿಟ್ಯೂಟ್ ಜನವರಿಯಲ್ಲಿ ಹೇಳಿಕೊಂಡಿತ್ತು.
ಭಾರತದಲ್ಲಿ ಈಗಾಗಲೇ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಬಯಾಲಾಜಿಕಲ್ ಸಂಸ್ಥೆ ತಯಾರಿಸಿದ ಕಾರ್ಬೆವ್ಯಾಕ್ಸ್ ಲಸಿಕೆಯನ್ನು 12 ರಿಂದ 14 ವರ್ಷದ ಮಕ್ಕಳಿಗೆ ನೀಡಲಾಗುತ್ತಿದೆ. ನೋವಾವ್ಯಾಕ್ಸ್ ಲಸಿಕೆಗೆ ಭಾರತೀಯ ಔಷಧ ನಿಯಂತ್ರಕರು ಕಳೆದ ಡಿಸೆಂಬರ್‌ನಲ್ಲಿ 18 ವರ್ಷ ಮೇಲ್ಪಟ್ಟವರ ಬಳಕೆಗೆ ಅನುಮೋದನೆ ನೀಡಿತ್ತು.